ಬಳ್ಳಾರಿ : ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಕೋವಿಡ್ ಊಟ, ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ, ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರುಗಳಿದ್ದರೆ, ದಾಖಲೆಗಳನ್ನು ಒದಗಿಸಿ ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಪಂ ಅಧ್ಯಕ್ಷೆ ಸಿ. ಭಾರತಿ ತಿಮ್ಮಾರೆಡ್ಡಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಜಿ.ಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಸಂಬಂಧಿಸಿದಂತೆ ಇನ್ನಷ್ಟು ಐಇಸಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವಂತೆ ಡಿಎಚ್‍ಒ ಅವರಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕೋವಿಡ್ ಸಂಬಂಧಿತ ಎಸ್‍ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ 20ಸಾವಿರ ಪ್ರಕರಣಗಳು ದೃಢಪಟ್ಟಿದ್ದು, ಅವುಗಳಲ್ಲಿ 15,500ಕ್ಕೂ ಹೆಚ್ಚು ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದರು. ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆಕ್ಸಿಜನ್ ಉತ್ಪಾದನೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಾಗುತ್ತಿದೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಗೆ ನಮ್ಮಿಂದ ನೀಡಲಾಗುತ್ತಿದೆ ಎಂದು ಜಿಪಂ ಸದಸ್ಯ ಮಾನಯ್ಯ, ವೆಂಕಟೇಶ ಹಾಗೂ ಇನ್ನಿತರರು ಸಭೆಯಲ್ಲಿ ಪ್ರಸ್ತಾಪಿಸಿದಕ್ಕೆ ಉತ್ತರಿಸಿದರು.
ಜಿಲ್ಲೆಯ ರೈತರಿಗೆ ಸಮರ್ಪಕ ಪ್ರಮಾಣದಲ್ಲಿ ಯೂರಿಯಾ ಗೊಬ್ಬರವನ್ನು ಪೂರೈಸಬೇಕು: ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಯೂರಿಯಾ ಗೊಬ್ಬರವನ್ನು ನಮ್ಮ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ರವಾನಿಸಲಾಗುತ್ತಿದೆ ಮತ್ತು ಕಾಳಸಂತೆಯಲ್ಲಿ ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದ್ದು, ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಸೂಚಿಸಿದರು.