ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ದಿನೇ ದಿನೆ ವ್ಯಾಪಕವಾಗುತ್ತಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಕೋವಿಡ್ ಕಾರ್ಯಕ್ಕೆ ಅವಶ್ಯವಿರುವ ಸಿಬ್ಬಂದಿಯನ್ನು ಬೇರೆ ಇಲಾಖೆಗಳಿಂದ ಪಡೆದುಕೊಂಡು ಕಾರ್ಯನಿರ್ವಹಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ತಹಶೀಲ್ದಾರರಿಗೆ ಸೂಚಿಸಿದ್ದಾರೆ.
ಉಪ ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್ ನಂತರ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್‍ನಿಂದ ತಹಶೀಲ್ದಾರರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದರು.
ಈಗಾಗಲೇ ಕೊರೊನಾ ಕರ್ಫ್ಯೂ ಘೋಷಿಸಿರುವುದರಿಂದ ಕೆಲ ಇಲಾಖೆಗಳು ಮಾತ್ರ ಕೆಲಸ ನಿರ್ವಹಿಸುತ್ತಿವೆ. ಇನ್ನೂ ಕೆಲ ಇಲಾಖೆಗಳು ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲಿರುವ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಿ. ನಂತರ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳ ಶೇ. 50ರಷ್ಟು ಸಿಬ್ಬಂದಿಯನ್ನು ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಬಳಸಿಕೊಳ್ಳುವಂತೆ ಸೂಚಿಸಿದರು.
ಬೇರೆ ಬೇರೆ ನಗರಗಳಿಂದ ಗ್ರಾಮಗಳಿಗೆ ಬರುವವರ ಮೇಲೆ ನಿಗಾ ವಹಿಸಿ, ಅವರನ್ನು ತಪಾಸಣೆ ಮಾಡಿ ಪಾಸಿಟಿವ್ ಬಂದಲ್ಲಿ ಹೋಂ ಐಸೋಲೇಷನ್‍ಗೆ ಒಳಪಡಿಸಿ. ಹಳ್ಳಿಯ ಜನರಿಗೆ ತಮ್ಮ ವ್ಯಾಪ್ತಿಯಲ್ಲಿಯೇ ಮನರೇಗಾ ಯೋಜನೆಯ ಕೆಲಸ ನೀಡಿ ಎಂದರು.
ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಆರ್ಆರ್ಟಿ ತಂಡದ ಸದಸ್ಯರು ಕಡ್ಡಾಯವಾಗಿ ಭೇಟಿಯಾಗಿ ಅವರ ಆರೋಗ್ಯ ತಪಾಸಣೆ ನಡೆಸಬೇಕು. ಅದರ ವಿವರವನ್ನು ಪುಸ್ತಕದಲ್ಲಿ ನಮೂದಿಸಬೇಕು. ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸವಾದಲ್ಲಿ ತಕ್ಷಣ ಆಸ್ಪತ್ರೆಗೆ ಶಿಫಾರಸು ಮಾಡಬೇಕು ಎಂದು ಹೇಳಿದ ಜಿಪಂ ಸಿಇಒ ಕೆ.ಆರ್.ನಂದಿನಿ, ಸಾವಿನ ಪ್ರಮಾಣ ಕಡಿಮೆ ಮಾಡುವ ಮತ್ತು ಶೀಘ್ರ ಗುಣಮುಖರಾಗುವಂತೆ ನೋಡಿಕೊಳ್ಳುವ ಕೆಲಸ ನಮ್ಮಿಂದ ಆಗಬೇಕು ಎಂದರು.
ಪ್ರತಿ ತಾಲೂಕಿನಲ್ಲಿ ಆರ್ಆರ್ಟಿ ಹಾಗೂ ಹೋಂ ಐಸೋಲೇಷನ್ ತಂಡದ ನೋಡಲ್ ಅಧಿಕಾರಿಗಳಿದ್ದು, ಈಗ ಯಾವ ರೀತಿ ಈ ಕಾರ್ಯ ನಡೆಯುತ್ತಿದೆ ಎಂಬುದರ ಸಂಪೂರ್ಣ ವರದಿ ಒದಗಿಸುವಂತೆ ಸೂಚಿಸಿದ್ರು. ಈ ತಂಡಗಳಿಗೆ ಬೇಕಾಗುವ ಅವಶ್ಯಕ ಪರಿಕರಗಳ ವಿವರ ಕೂಡ ಒದಗಿಸುವಂತೆ ತಿಳಿಸಿದರು.
ಲಕ್ಷಣ ಇರುವವರಿಗೆ ಫೀವರ್ ಕ್ಲಿನಿಕ್‍ನಲ್ಲಿ ತಪಾಸಣೆ ನಡೆಸಬೇಕು ಎಂದು ಸೂಚಿಸಿದರು. ಇನ್ನು ಕೋವಿಡ್ ಕೇರ್ ಸೆಂಟರ್ಗಳು ಯಾವ್ಯಾವ ಕಡೆ ಅಗತ್ಯ ಇದೆ ಎಂಬುದರ ವಿವರ ಕೂಡ ಅವರು ಇದೇ ಸಂದರ್ಭದಲ್ಲಿ ಪಡೆದುಕೊಂಡರು.