ಬಳ್ಳಾರಿ: ಮೌಢ್ಯಾಚರಣೆ, ಕಂದಾಚಾರದಂತಹ ಅನಿಷ್ಠ ಪದ್ಧತಿಗೆ ಒಳಗಾಗಿರುವ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿನ ಗರ್ಭೀಣಿಯರ ಮನೆಗಳಲ್ಲಿ ಶೌಚಾಲಯ, ಬಚ್ಚಲು ನಿರ್ಮಾಣಕ್ಕೆ ಭಾರಿ ವಿರೋಧವಿದೆ. ಆದರೆ, ಅದನ್ನು ಸೂಕ್ಷ್ಮವಾಗಿ ಗಮನಿಸಿದ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಕೆ. ಆರ್. ನಂದಿನಿ ಅವರು ಈ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಸದ್ದಿಲ್ಲದೇ ಚಾಲನೆ ನೀಡಿದ್ದಾರೆ.
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯಾ ಗ್ರಾಮಗಳಲ್ಲಿನ ಶೌಚಾಲಯ, ಬಚ್ಚಲು ನಿರ್ಮಾಣ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುವ ಗರ್ಭೀಣಿಯರ ಮನೆಗಳಿಗೆ ಜಿಲ್ಲಾ ಪಂಚಾಯಿತಿ ಕಾರ್ಯವ್ಯಾಪ್ತಿಗೆ ಬರುವ ತಾ. ಪಂ. ಇಒ, ಪಿಡಿಒ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ. ಬಹುಮುಖ್ಯವಾಗಿ ಗರ್ಭೀಣಿಯರಿಗೆ ಹಾಗೂ ಆಕೆಯ ತಾಯಿಯಂದಿರಿಗೆ ಅರಿವು ಮೂಡಿಸುವ ಮೂಲಕ ಶೌಚಾಲಯ, ಬಚ್ಚಲು ನಿರ್ಮಾಣಕ್ಕೆ ಮುಂದಾಗಿರೋದು ಶ್ಲಾಘನಾರ್ಹ.