ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದ 8 ವರ್ಷದ ಬಾಲಕ ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿರುಗುಪ್ಪದ ಕೆ.ಮಹೇಶ್ ಹಾಗೂ ಈರಮ್ಮ ದಂಪತಿಯ ಪುತ್ರ ನಿಖಿಲ್ (8) ಮೃತ ಬಾಲಕ.
ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಈತನನ್ನು ಸೆ.11ರಂದು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಸರಣಿ ಸಾವು ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಈ ವಿಚಾರ ಗುರುವಾರ ಸಂಜೆಯ ವೇಳೆಗೆ ಬಹಿರಂಗವಾಗಿದೆ.
ಮೃತ ಬಾಲಕನ ತಾಯಿ ಪ್ರತಿಕ್ರಿಯೆ ನೀಡಿರುವುದು. "ನನ್ನ ಮಗನನ್ನು ಐಸಿಯುದಲ್ಲಿ ಅಡ್ಮಿಟ್ ಮಾಡಿದ್ದೆವು. ವೆಂಟಿಲೇಟರ್ ಮೇಲಿದ್ದ. ಆದರೆ ನಿನ್ನೆ ಬೆಳಿಗ್ಗೆ ಕರೆಂಟ್ ಹೋದಾಗ ಮಶೀನ್‍ಗಳೆಲ್ಲ ಬಂದ್ ಆದವು. ಯಾಕೆ ಹೀಗೆ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆವು. ಕರೆಂಟ್ ಹೋಗಿದೆ ಎಂದರು. ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ" ಎಂದು ತಾಯಿ ಈರಮ್ಮ ಹೇಳಿದರು.
ಈ ಮೂಲಕ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ಮೃತರಾದವರು ಎಷ್ಟು ಜನ? ಎಂಬ ಪ್ರಶ್ನೆ ಉದ್ಭವವಾಗಿದೆ. ಈಗಾಗಲೇ ಮೌಲಾ ಹುಸೇನ್, ಚಿಟ್ಟೆಮ್ಮ, ಚಂದ್ರಮ್ಮ ಹಾಗೂ ಮನೋಜ್ ಅವರು ವಿದ್ಯುತ್ ವ್ಯತ್ಯಯದಿಂದಲೇ ವೆಂಟಿಲೇಟರ್ ಸ್ಥಗಿತಗೊಂಡು ಮೃತರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದರು.
ಈಗ ನಿಖಿಲ್ ಪೋಷಕರು ಆರೋಪ ಮಾಡುವ ಮೂಲಕ ವಿದ್ಯುತ್ ವ್ಯತ್ಯಯದಿಂದ ವೆಂಟಿಲೇಟರ್ ಸ್ಥಗಿತವಾಗಿ, ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವವರ ಸಂಖ್ಯೆ 5 ಕ್ಕೇರಿದಂತಾಗಿದೆ. ಈ ಸಾವುಗಳ ಕುರಿತು ಈಗಾಗಲೇ ಸರ್ಕಾರ ತನಿಖಾ ಸಮಿತಿ ರಚಿಸಿದ್ದು, ಸತ್ಯಾಸತ್ಯತೆ ಹೊರಬರಬೇಕಿದೆ.
ಇದನ್ನೂ ಓದಿ:ವಿಮ್ಸ್ ತೀವ್ರ ನಿಗಾ ಘಟಕದಲ್ಲಿದ್ದಇಬ್ಬರು ಸಾವು: ಘಟನೆ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?
ಮತ್ತಷ್ಟು ಮಾಹಿತಿ:ಗಣಿನಾಡು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಟ್ಟಮ್ಮ (30) ಹಾಗೂ ಮೌಲಾಹುಸೇನ್ (38) ಚಂದ್ರಮ್ಮ (65) ಮೂವರು ಏಕಾಏಕಿ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಆಸ್ಪತ್ರೆಯ ಐಸಿಯುಗೆ ಪೂರೈಕೆ ಆಗುತ್ತಿದ್ದ ವಿದ್ಯುತ್ ಕಡಿತವೇ ಈ ಸಾವುಗಳಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.