ಬಳ್ಳಾರಿ:ಮೆಟ್ರಿಕ್ ಪೂರ್ವ ಮತ್ತುಮೆಟ್ರಿಕ್ ನಂತರದ ಹಾಸ್ಟೆಲ್ಗಳಲ್ಲಿ ಅವಕಾಶ ಸಿಗದವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಸೌಲಭ್ಯ ನೀಡಲಾಗುವುದು ಎಂದು ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಆರ್.ಸುರೇಶ್ ಬಾಬು ತಿಳಿಸಿದರು.
ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ 2019-20ನೇ ಸಾಲಿನಲ್ಲಿ 2587 ವಿದ್ಯಾರ್ಥಿಗಳು ಮರು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 3013 ವಿದ್ಯಾರ್ಥಿಗಳಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಆದರೆ 11,470 ವಿದ್ಯಾರ್ಥಿಗಳು ಈ ಹಾಸ್ಟೆಲ್ಗಳಿಗೆ ಅರ್ಜಿ ಸಲ್ಲಿಸಿದ್ದರು. ಆದ್ದರಿಂದ 8457 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ದೊರೆತಿಲ್ಲ. ಹಾಸ್ಟೆಲ್ ಬದಲಾಗಿ ಸರ್ಕಾರದ ಕಡೆಯಿಂದ ತಿಂಗಳಿಗೆ ಒಬ್ಬ ವಿದ್ಯಾರ್ಥಿಗೆ 1500 ರೂಪಾಯಿಯಂತೆ 10 ತಿಂಗಳವರೆಗೆ ವಿದ್ಯಾಸಿರಿ ಯೋಜನೆಯಲ್ಲಿ ಹಣ ನೀಡಲಾಗಿದೆ. 2018-19ನೇ ಸಾಲಿನಲ್ಲಿ ಮೆಟ್ರಿಕ್ ನಂತರದಲ್ಲಿ 3,880 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಅಡಿಯಲ್ಲಿ 3 ಕೋಟಿ 98 ಲಕ್ಷ 98 ಸಾವಿರ ಪಾವತಿ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ 59 ಮೆಟ್ರಿಕ್ ಪೂರ್ವ ಮತ್ತು 56 ಮೆಟ್ರಿಕ್ ನಂತರದ ಹಾಸ್ಟೆಲ್ಗಳಿವೆ. ಮೆಟ್ರಿಕ್ ಪೂರ್ವ ಹಾಸ್ಟೆಲ್ನಲ್ಲಿ 3930 ವಿದ್ಯಾರ್ಥಿಗಳು, ಮೆಟ್ರಿಕ್ ನಂತರದಲ್ಲಿನ ಹಾಸ್ಟೆಲ್ನಲ್ಲಿ 5775 ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಸತಿ ನಿಲಯಗಳ ಖರ್ಚು ವೆಚ್ಚ ಹೇಗೆ :
115 ವಸತಿ ನಿಲಯಗಳಲ್ಲಿ 50 ಸ್ವಂತ ಕಟ್ಟಡಗಳು, 3 ಉಚಿತ ಕಟ್ಟಡಗಳಿವೆ. 62 ವಸತಿ ನಿಲಯದ ಕಟ್ಟಡಗಳು ಬಾಡಿಗೆಯಲ್ಲಿ ನಡೆಯುತ್ತಿದೆ. ಅದರ ತಿಂಗಳ ವೆಚ್ಚ 9 ಲಕ್ಷ 7 ಸಾವಿರ 860 ರೂಪಾಯಿ ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.