ಬಳ್ಳಾರಿ:ತಾಲೂಕಿನ ಯರಗುಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ಸಿನಿಮೀಯ ಶೈಲಿಯ ಗಲಾಟೆಯಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಮೋಕಾ ಠಾಣೆಯ ಪೊಲೀಸರಿಂದ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.
ಅಣ್ಣ-ತಮ್ಮಂದಿರ ಸಿನಿಮೀಯ ಶೈಲಿಯಗಲಾಟೆ ಪ್ರಕರಣ: ಸಂತ್ರಸ್ತರಿಗೆ ಪೊಲೀಸರಿಂದಲೇ ಕಿರುಕುಳ ಆರೋಪ.. ಕಳೆದ ಮೂರು ತಿಂಗಳ ಹಿಂದಷ್ಟೇ ಬಳ್ಳಾರಿ ತಾಲೂಕಿನ ಯರಗುಡಿ ಗ್ರಾಮದಲ್ಲಿ ಆಸ್ತಿಯ ವಿಚಾರವಾಗಿ ಅಣ್ಣ - ತಮ್ಮಂದಿರ ಮಧ್ಯೆ ಸಿನಿಮೀಯ ಶೈಲಿಯಲ್ಲಿ ಬಡಿದಾಟ ನಡೆದಿತ್ತು. ಅದು ಬಹಳಷ್ಟು ಆತಂಕವನ್ನೇ ಸೃಷ್ಟಿ ಮಾಡಿತ್ತು. ಆ ಬಡಿದಾಟದಲ್ಲಿ ಉಭಯ ಕುಟುಂಬಸ್ಥರು ಪರಸ್ಪರ ಬಡಿಗೆ ಹಿಡಿದುಕೊಂಡು ಹೊಡೆದಾಟ ನಡೆಸುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಭಾರಿ ಸಂಚಲನ ಉಂಟು ಮಾಡಿತ್ತು.
ಆದರೆ, ಆ ಗಲಾಟೆಯಲ್ಲಿ ಗಾಯಗೊಂಡ ಸಂತ್ರಸ್ತರಿಗೆ ಪೊಲೀಸರೇ ಅನಗತ್ಯವಾಗಿ ತೊಂದರೆ - ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದ್ದು, ಎದುರಾಳಿಗಳ ಪ್ರಭಾವದಿಂದಲೇ ಇಂತಹ ವರ್ತನೆ ಪ್ರದರ್ಶನ ಆಗುತ್ತಿದೆ. ಈ ಹೊಡೆದಾಟ ನಡೆದು ಮೂರು ತಿಂಗಳಾದರೂ ಆರೋಪಿಗಳನ್ನ ಬಂಧಿಸದ ಮೋಕಾ ಠಾಣೆಯ ಪೊಲೀಸರು ಸಂತ್ರಸ್ತರಿಗೆ ಕಿರುಕುಳ ನೀಡ್ತಿದ್ದಾರೆಂದು ಆರೋಪಿಸಲಾಗುತ್ತಿದೆ.
ಗ್ರಾಮದ ಲಿಂಗಾರೆಡ್ಡಿ, ಪ್ರಹ್ಲಾದ ರೆಡ್ಡಿ, ಮೋಹನ ರೆಡ್ಡಿ, ಮತ್ತು ಸಹೋದರ ಸಂಬಂಧಿಯಾದ ಚಂದ್ರಾ ರೆಡ್ಡಿ ಮಧ್ಯೆ ಆಸ್ತಿ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು. ಜಗಳ ವಿಕೋಪಕ್ಕೆ ತಿರುಗಿ ಆಗಸ್ಟ್ 20 ರಂದು ಸಿನಿಮೀಯ ಶೈಲಿಯಲ್ಲಿ ಬಡಿಗೆಗಳಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಸಹೋದರ ಸಂಬಂಧಿ ಚಂದ್ರಾರೆಡ್ಡಿ ಎಂಬ ವ್ಯಕ್ತಿ ಲಿಂಗಾರೆಡ್ಡಿ ಕುಟುಂಬದ ಮಹಿಳೆಯರನ್ನು ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಆದರೆ, ಚಂದ್ರಾರೆಡ್ಡಿ ವಿರುದ್ಧ ದೂರು ನೀಡಿದರೂ ಮೋಕಾ ಠಾಣೆಯ ಪೊಲೀಸರು ಬಂಧಿಸದೇ ಲಿಂಗಾರೆಡ್ಡಿ ಅವರನ್ನು ಬಂಧಿಸಿದ್ದಾರೆ. ಅಲ್ಲದೇ ನಮಗೆ ವಿಪರೀತ ಟಾರ್ಚರ್ ನೀಡುತ್ತಿದ್ದಾರೆ ಎಂದು ಲಿಂಗಾರೆಡ್ಡಿ ಕುಟುಂಬದ ಸದಸ್ಯೆ ಹೇಮಲತಾ ದೂರಿದ್ದಾರೆ.
ಆದರೆ, ಆಸ್ತಿ ವಿಚಾರದಲ್ಲಿ ಮೂವರು ಮಕ್ಕಳಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇತ್ತು. ಹೀಗಾಗಿ ಗ್ರಾಮದ ಇತರೆ ಜನರನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದ್ದಲ್ಲದೇ, ಲಿಂಗಾರೆಡ್ಡಿ ಕುಟುಂಬದ ಮೇಲೆ ಜಾತಿನಿಂದನೆ ಕೇಸ್ ದಾಖಲಿಸಿದ್ದಾರೆ. ಪೊಲೀಸರ ಈ ನಡೆಯಿಂದ ಸಂತ್ರಸ್ತ ಕುಟುಂಬದವರನ್ನು ಕಂಗಾಲಾಗಿಸಿದೆ. ಹೀಗಾಗಿ ಮಹಿಳೆ ಎಂಬುದನ್ನ ನೋಡದೇ ಹಲ್ಲೆ ಮಾಡಲಾಗಿದೆ. ಹೀಗಾಗಿ ಪೊಲೀಸರು ಇನ್ನಾದರೂ ಎಚ್ಚೆತ್ತುಕೊಂಡು ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ರೈತ ಮುಖಂಡ ಮಾಧವರೆಡ್ಡಿ ಆಗ್ರಹಿಸಿದ್ದಾರೆ.