ಬಳ್ಳಾರಿ:ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೈದುಲ್ಲಾ ಅಡಾವತ್ ಅವರು ಅಧಿಕಾರ ಸ್ವೀಕರಿಸಿದರು.
ಇಂದು ಬೆಳಗ್ಗೆ 10ಗಂಟೆಗೆ ನೂತನ ಎಸ್ಪಿ ಅಡಾವತ್ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ನಿರ್ಗಮಿತ ಎಸ್ಪಿ ಸಿ.ಕೆ.ಬಾಬಾ ಅವರು ಅಧಿಕಾರ ಹಸ್ತಾಂತರಿಸಲು ವಿಳಂಬ ಧೋರಣೆ ತೋರಿದ ಹಿನ್ನಲೆಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸಂಜೆಯೊತ್ತಿಗೆ ನಡೆಯಿತು.
ಅಧಿಕಾರ ಹಸ್ತಾಂತರದ ಹೈ ಡ್ರಾಮಾ: ಆಗಸ್ಟ್ 27ರಂದು ಬಳ್ಳಾರಿ ಸಿ.ಕೆ. ಬಾಬಾ ಅವರಿಗೆ ವರ್ಗಾವಣೆ ಆದೇಶವಾಗಿತ್ತು. ಅಂದು ಸಂಜೆಯೇ ಆ ಆದೇಶವನ್ನು ತಡೆ ಹಿಡಿಯಲಾಗಿತ್ತು ಎನ್ನಲಾಗುತ್ತಿದೆ. ಬಳಿಕ ಮತ್ತೊಮ್ಮೆ ಆದೇಶವನ್ನು ಹಿಂಪಡೆಯಲಾಗಿತ್ತು. ಅಂದಿನಿಂದ ಇಂದಿನವರೆಗೂ ನಿರ್ಗಮಿತ ಎಸ್ಪಿ ಸಿ.ಕೆ.ಬಾಬಾ ಅವರು ಅಧಿಕಾರ ಹಸ್ತಾಂತರ ಮಾಡಲು ಹಿಂದೇಟು ಹಾಕಿದ್ದರು.
ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೈದುಲ್ಲಾ ಅಡಾವತ್ ಅಧಿಕಾರ ಹಸ್ತಾಂತರ ಮಾಡಲು ಜನಪ್ರತಿನಿಧಿಗಳ ಮೌಖಿಕ ಅದೇಶಕ್ಕೆ ನಿರ್ಗಮಿತ ಎಸ್ಪಿ ಸಿ.ಕೆ. ಬಾಬಾ ಕಾದು ಕುಳಿತಿದ್ದರು. ಕೊನೆಗೂ ಜನಪ್ರತಿ ನಿಧಿಗಳಿಂದ ಯಾವುದೇ ಮೌಖಿಕ ಆದೇಶ ಬಾರದ ಕಾರಣ ಬಾಬಾ ಅಧಿಕಾರಿ ಹಸ್ತಾಂತರ ನೀಡಿದರು.
ಜಿಲ್ಲೆಯ ಎಸ್ಪಿ ಹುದ್ದೆಗೆ ಆಗಸ್ಟ್ 26 ರಂದು ನೇಮಕಗೊಳಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇಂದು ಅಧಿಕಾರ ಸ್ವೀಕರಿಸಿದ್ದೇನೆ. ನನಗೆ ಈ ಜಿಲ್ಲೆಯ ಎಸ್ಪಿಯಾಗಿ ಬಂದಿರುವುದು ಹೆಮ್ಮೆ ಎನಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಗತ ವೈಭವದ ಇತಿಹಾಸ ಹೊಂದಿರುವ ಈ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.