ಬಳ್ಳಾರಿ : ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಬಳ್ಳಾರಿ ರೈಲ್ವೆ ನಿಲ್ದಾಣದ ಅಭಿವೃದ್ದಿ ಕಾರ್ಯಕ್ರಮಕ್ಕೆ ಇಂದು (ಭಾನುವಾರ) ಸಂಸದ ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು. ನಗರದ ಪಾರಂಪರಿಕ ಕಟ್ಟಡವಾದ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಿತು. 16.7 ಕೋಟಿ ರೂ. ವೆಚ್ಚದಲ್ಲಿ ಈ ನಿಲ್ದಾಣದ ಅಭಿವೃದ್ದಿ ಕಾರ್ಯ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸದ ದೇವೇಂದ್ರಪ್ಪ ಮಾತನಾಡಿ, "ಬಳ್ಳಾರಿ ರೈಲ್ವೆ ನಿಲ್ದಾಣ, ರೈಲ್ವೆ ಸಂಪರ್ಕ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡುತ್ತೇನೆ. ಸುಧಾ ಕ್ರಾಸ್ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಆದಷ್ಟು ಬೇಗ ಫ್ಲೈ ಓವರ್ ನಿರ್ಮಾಣ ಮಾಡುಲಾಗುತ್ತದೆ" ಎಂದು ತಿಳಿಸಿದರು.
ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, "ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ 150 ವರ್ಷಗಳ ಇತಿಹಾಸವಿದೆ. ಗಾಂಧೀಜಿ ಸ್ವಾತಂತ್ರ್ಯ ಹೋರಾಟಗಾರರನ್ನು ಹುರಿದುಂಬಿಸುವ ಸಲುವಾಗಿ ಈ ನಿಲ್ದಾಣದಲ್ಲಿ ಸುಮಾರು 8 ಗಂಟೆಗಳ ಕಾಲ ವಾಸ್ತವ್ಯ ಹೂಡಿದ್ದರು. ಇಂತಹ ರೈಲು ನಿಲ್ದಾಣವನ್ನು ಅಭಿವೃದ್ಧಿ ಮಾಡಬೇಕು. ರೈಲ್ವೆ ಜೋನ್ ಅಭಿವೃದ್ಧಿಪಡಿಸಲು ಅನುಮತಿ ಬೇಕಾಗುತ್ತದೆ. ಅನುಮತಿ ಬೇಗ ಸಿಕ್ಕರೆ ರಾಜ್ಯ ಸರ್ಕಾರದಿಂದ ಜೋನ್ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಬೇಕಾದ ಸೌಲಭ್ಯ ನೀಡುತ್ತೇವೆ" ಎಂದರು.
ಚೀಫ್ ಪ್ರಾಜೆಕ್ಟ್ ಮ್ಯಾನೇಜರ್ ಜಿ.ಆರ್.ಎಸ್ ರಾವ್ ಮಾತನಾಡಿ, "ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಸುಮಾರು 17 ಕೋಟಿ ವೆಚ್ಚದಲ್ಲಿ ಬಳ್ಳಾರಿ ನಗರದಲ್ಲಿನ ರೈಲ್ವೆ ನಿಲ್ದಾಣದ ಕಟ್ಟಡವನ್ನು ಒಳಾಂಗಣ ಮತ್ತು ಹೊರಗಡೆ ಕಟ್ಟಡವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ" ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ತ್ರಿವೇಣಿ, ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಮಹೇಶ್ವರಯ್ಯ ಸ್ವಾಮಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀನಿವಾಸ್ ರಾವ್, ಸಂಜಯ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಅಮೃತ್ ಭಾರತ್ ನಿಲ್ದಾಣ ಯೋಜನೆಗೆ ಪ್ರಧಾನಿ ಚಾಲನೆ : ದೇಶಾದ್ಯಂತ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಮಂಗಳೂರು ಜಂಕ್ಷನ್ 18.5 ಕೋಟಿ, ಹುಬ್ಬಳ್ಳಿ ವಿಭಾಗದ ಅಳ್ನಾವರ ನಿಲ್ದಾಣ 17.2 ಕೋಟಿ, ಘಟಪ್ರಭಾ ನಿಲ್ದಾಣ 18.02 ಕೋಟಿ, ಗೋಕಾಕ್ ರೋಡ್ ನಿಲ್ದಾಣ 17 ಕೋಟಿ, ಗದಗ ರೈಲ್ವೆ ನಿಲ್ದಾಣ 23.2 ಕೋಟಿ, ಕೊಪ್ಪಳ ರೈಲ್ವೆ ನಿಲ್ದಾಣ 21.1 ಕೋಟಿ, ಬೀದರ್ ರೈಲ್ವೆ ನಿಲ್ದಾಣ 24.4 ಕೋಟಿ, ಬಳ್ಳಾರಿ ರೈಲ್ವೆ ನಿಲ್ದಾಣ 16.7 ಕೋಟಿ, ಅರಸೀಕೆರೆ ರೈಲ್ವೆ ನಿಲ್ದಾಣ 34.1 ಕೋಟಿ, ಹರಿಹರ ರೈಲ್ವೆ ನಿಲ್ದಾಣ 25.2 ಕೋಟಿ, ವಾಡಿ ರೈಲ್ವೆ ನಿಲ್ದಾಣ 32.7 ಕೋಟಿ, ಕಲಬುರಗಿ ಜಂಕ್ಷನ್ 29.1 ಕೋಟಿ, ಶಹಬಾದ್ ರೈಲ್ವೆ ನಿಲ್ದಾಣ 26.1 ಕೋಟಿ ರೂ. ವೆಚ್ಚದಲ್ಲಿ ವಿಶ್ವದರ್ಜೆಯ ಸೌಕರ್ಯಗಳನ್ನು ಒದಗಿಸಲು ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ :ಕರ್ನಾಟಕದ 13 ಸೇರಿ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ಮೋದಿ ವಿದ್ಯುಕ್ತ ಚಾಲನೆ.. I.N.D.I.A ಒಕ್ಕೂಟದ ವಿರುದ್ಧ ಟೀಕೆ