ಬಳ್ಳಾರಿ: ಕೆಕೆಆರ್ ಟಿಸಿ ಡಿವಿಜನಲ್ ಸೆಕ್ಯೂರಿಟಿ ಇನ್ಸ್ಪೆಕ್ಟರ್ ಬಿ ಹುಸೇನಪ್ಪ ಎಂಬುವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ನಿನ್ನೆ ಬುಧವಾರ ಗಾಂಧಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜೀವ್ ಗಾಂಧಿ ನಗರದ ನಿವಾಸಿ ಕಟ್ಟೆಸ್ವಾಮಿ (41), ಕೊಳಗಲ್ ಗ್ರಾಮದ ಮಾನಪ್ಪ (40) ಬಂಧಿತ ಆರೋಪಿಗಳು.
ಬಳ್ಳಾರಿ ನಗರದ ಜೈಲು ಕಾಂಪೌಂಡ್ ಹತ್ತಿರದಲ್ಲಿ ಕೆಕೆಆರ್ಟಿಸಿ ಡಿವಿಜನಲ್ ಸೆಕ್ಯೂರಿಟಿ ಇನ್ಸ್ಪೆಕ್ಟರ್ ಬಿ ಹುಸೇನಪ್ಪ ಅವರನ್ನು ಆಗಸ್ಟ್ 6 ರಂದು ರಾತ್ರಿ 9 ಗಂಟೆಗೆ ಕೊಲೆ ಮಾಡಲಾಗಿತ್ತು. ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದರು. ಆರೋಪಿಗಳು ಕೊಲೆ ಮಾಡಿ ಎರಡು ತಿಂಗಳಾದರೂ, ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದರು. ಡಿಸೆಂಬರ್ 6 ರಂದು ಗಾಂಧಿನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಕಟ್ಟೆಸ್ವಾಮಿ ಮತ್ತು ಕೊಲೆಯಾದ ಹುಸೇನಪ್ಪ ಅವರ ನಡುವೆ ಹಣದ ವ್ಯವಹಾರ ಇತ್ತು. ಹಣ ಕೇಳಲು ಹೋಗಿದ್ದ ಕಟ್ಟೆಸ್ವಾಮಿಗೆ ಕೊಲೆಗೀಡಾದ ಹುಸೇನಪ್ಪ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಈ ಅವಮಾನ ಸಹಿಸದ ಆರೋಪಿ ಕಟ್ಟೆಸ್ವಾಮಿ ಹಾಗೂ ಇನ್ನೊಬ್ಬ ಆರೋಪಿ ಮಾನಪ್ಪ ಸೇರಿಕೊಂಡು ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಳ್ಳಾರಿ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಟ್ಟೆಸ್ವಾಮಿ ಹಾಗೂ ಮಾನಪ್ಪ ಎಂಬ ಈ ಇಬ್ಬರು ಆರೋಪಿಗಳು ಸೇರಿಕೊಂಡು ಕೆಕೆಆರ್ ಟಿಸಿ ಡಿವಿಜನಲ್ ಸೆಕ್ಯೂರಿಟಿ ಇನ್ಸ್ಪೆಕ್ಟರ್ ಬಿ ಹುಸೇನಪ್ಪ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಆದರೆ ಗಾಂಧಿನಗರ ಠಾಣೆ ವ್ಯಾಪ್ತಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೊಲೆಗೆ ಹಣದ ವ್ಯವಹಾರ ಕಾರಣ ಅನ್ನೋದು ಪ್ರಾಥಮಿಕ ತಿಳಿದು ಬಂದಿದೆ. ಆದರೆ ಇನ್ನೂ ಪೊಲೀಸ್ ಇಲಾಖೆಯಿಂದ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದ್ದಾರೆ.
ಇದನ್ನೂಓದಿ:ಸ್ನೇಹಿತನ ಹಣ ಕೊಡಿಸಲು ಹೋದ ವ್ಯಕ್ತಿಯ ಕೊಲೆ: ಆರೋಪಿ ಪರಾರಿ