ಬಳ್ಳಾರಿ: ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಸಂಡೂರು ತಹಶೀಲ್ದಾರ್ ರಶ್ಮಿ ಹಾಗೂ ಸಿರಗುಪ್ಪ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ವಿವಿಧೆಡೆ ದಿಢೀರ್ ಕಾರ್ಯಾಚರಣೆ ನಡೆಸಿ ಐವರು ನಕಲಿ ವೈದ್ಯರನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಅವರು ನಡೆಸುತ್ತಿದ್ದ ಕ್ಲಿನಿಕ್ ಜಪ್ತಿ ಮಾಡಿದ್ದು, ಈ ನಕಲಿ ವೈದ್ಯರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ-1
ಸಂಡೂರು ತಾಲೂಕಿನ ಸೋವೆನಹಳ್ಳಿಯಲ್ಲಿ ಯಾವುದೇ ವಿದ್ಯಾರ್ಹತೆ ಇಲ್ಲದೇ ಕರ್ನೂಲ್ ಮೂಲದ ಎಂ. ಷಣ್ಮಖುಡು ಹಾಗೂ ರಾಮು ಎನ್ನುವವರು ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂಬ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಂಡೂರು ತಹಶೀಲ್ದಾರ್ ರಶ್ಮಿ ಎಚ್.ಜೆ ಹಾಗೂ ಆರೋಗ್ಯ ಇಲಾಖೆಯ ಡಾ. ಕೋಟ್ರೇಶ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಇಬ್ಬರು ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಹಾಗೂ ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಪಡೆದ ಅಧಿಕೃತ ದಾಖಲೆಗಳನ್ನು ಹೊಂದಿರಲಿಲ್ಲ.
ಆರೋಪಿಗಳ ವ್ಯಕ್ತಿಗಳ ಕ್ಲಿನಿಕ್ ಸಂಪೂರ್ಣ ಜಪ್ತಿ ಮಾಡಲಾಗಿದ್ದು, ಐಪಿಸಿ 420 ಹಾಗೂ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮಗಳ ಕಾಯ್ದೆ ಹಾಗೂ ನಿಯಮ 2007 ಮತ್ತು 2009ರ ಕಲಂ 194 ಅಡಿ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣ-2
ಗೆಣತಿಕಟ್ಟೆಯಲ್ಲಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದಾಖಲೆಗಳನ್ನು ಹೊಂದದೆ ನಕಲಿ ವೈದ್ಯ ವೃತ್ತಿ ನಡೆಸುತ್ತಿದ್ದ ಗುರುಬಸವರಾಜ ಎ. ಎಂ(ಹರಪನಳ್ಳಿ ತಾಲೂಕಿನ ತೌಡೂರು ಗ್ರಾಮ) ಅವರ ಮೇಲೆ ಕಾರ್ಯಾಚರಣೆ ನಡೆಸಿದ ತಹಶೀಲ್ದಾರ್ ರಶ್ಮಿ ನೇತೃತ್ವದ ತಂಡ ಕ್ಲಿನಿಕ್ ಸಂಪೂರ್ಣ ಜಪ್ತಿ ಮಾಡಿಕೊಂಡು ಗುರುಬಸವರಾಜು ಬಂಧಿಸಿ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.