ಬಳ್ಳಾರಿ :ಏಪ್ರಿಲ್ 27ರಂದು ನಡೆಯಲಿರುವ ಬಳ್ಳಾರಿ ಮಹಾನಗರ ಪಾಲಿಕೆ ಮತದಾನ ಪ್ರಕ್ರಿಯೆಗೆ ಮತ್ತು ಮತ ಎಣಿಕೆ ಕಾರ್ಯಕ್ಕೆ ಸ್ಥಳೀಯ ಅಧಿಕಾರವರ್ಗ ಹಾಗೂ ನೌಕರರನ್ನ ನಿಯೋಜನೆ ಮಾಡಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಓದಿ: ರಾಜ್ಯದಲ್ಲಿ ಕೊರೊನಾ ಶಾಕ್..! 23,558 ಮಂದಿಗೆ ಪಾಸಿಟಿವ್ ದೃಢ; 116 ಸೋಂಕಿತರ ಸಾವು
ಈ ಸಾರ್ವತ್ರಿಕ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಜಿಲ್ಲೆಯ ಅನ್ಯ ತಾಲೂಕು, ಜಿಲ್ಲೆಗಳಿಂದ ನೌಕರರನ್ನ ಕರೆತರುವುದು ವಾಡಿಕೆ. ಅದು ರಾಜ್ಯ ಚುನಾವಣಾ ಆಯೋಗದ ಕಟ್ಟು ನಿಟ್ಟಿನ ನಿಯಮವೂ ಹೌದು. ಯಾಕೆಂದರೆ, ಇಂತಹ ಚುನಾವಣೆಯಲ್ಲಿ ಸ್ಥಳೀಯ ನೌಕರ ವರ್ಗದವರನ್ನ ನಿಯೋಜಿಸಿದರೆ ಚುನಾವಣಾ ಪ್ರಕ್ರಿಯೆ ಪಾರದರ್ಶಕತೆ ಕಾಪಾಡುವುದು ಕಷ್ಟ ಸಾಧ್ಯ ಅನ್ನೋದು ಆಯೋಗದ ಚಿಂತನೆ.
ಹೀಗಾಗಿ, ಪ್ರತಿ ಚುನಾವಣೆಗೂ ಕೂಡ ಹೊರಗಿನ ತಾಲೂಕು ಅಥವಾ ಅನ್ಯ ಜಿಲ್ಲೆಗಳ ನಾನಾ ಇಲಾಖೆಗಳ ನೌಕರರನ್ನ ನಿಯೋಜಿಸುವುದನ್ನ ನಾವೆಲ್ಲಾ ಕಂಡಿದ್ದೇವೆ. ಆದರೆ, ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಮತದಾನ ಪ್ರಕ್ರಿಯೆಗೆ ಸ್ಥಳೀಯ ನೌಕರರನ್ನೇ ನಿಯೋಜನೆ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಬಳ್ಳಾರಿ ಪಾಲಿಕೆ ಚುನಾವಣೆಗೆ ಸ್ಥಳೀಯ ನೌಕರರ ಬಳಕೆಗೆ ಆಕ್ಷೇಪ.. ಇದರಿಂದ ಚುನಾವಣಾ ಪಾರದರ್ಶಕತೆ ಪ್ರಶ್ನೆಯೂ ಉದ್ಭವಿಸಿದೆ. ಸ್ಥಳೀಯ ನೌಕರರನ್ನ ಈ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದರಿಂದ ಮತದಾರರಲ್ಲಿ ನಿರ್ಭೀತಿಯಿಂದ ಮತದಾನ ಮಾಡುವ ಕಾರ್ಯಕ್ಕೂ ಕೊಂಚ ಮಟ್ಟಿಗೆ ಹಿನ್ನಡೆಯಾಗಲಿದೆ. ವ್ಯಕ್ತಿ ಕೇಂದ್ರೀತ ಅಥವಾ ಸೀಮಿತ ಪಕ್ಷ ಕೇಂದ್ರೀತ ಚುನಾವಣೆ ಆಗುವ ಸಾಧ್ಯತೆ ಹೆಚ್ಚಾಗಲಿದೆ.
ಹೀಗಾಗಿ, ಚುನಾವಣಾ ಕರ್ತವ್ಯಕ್ಕೆ ಸ್ಥಳೀಯರನ್ನ ನಿಯೋಜಿಸುವುದು ಬೇಡ. ಕೋವಿಡ್ ಕಾರಣ ಹೇಳಿ ಇಲ್ಲಿಯವರನ್ನೇ ಈ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವುದು ಬೇಡ ಅಂತ ಹೆಸರು ಹೇಳಲಿಚ್ಚಿಸದ ಉಪನ್ಯಾಸಕರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಜಿಲ್ಲಾಡಳಿತದ ಬಳಿ ಮಾಹಿತಿಯೇ ಇಲ್ಲ :ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ನೌಕರರು ಸ್ಥಳೀಯರೇ ಅಥವಾ ಹೊರಗಿನಿಂದ ಕರೆ ತರಲಾಗಿದೆಯಾ ಎಂಬ ಮಾಹಿತಿ ಜಿಲ್ಲಾಡಳಿತದ ಬಳಿಯೇ ಇಲ್ಲ.
ಹಾಗೊಂದು ವೇಳೆ ಮಾಹಿತಿ ಇದ್ದರೆ ಕೂಡಲೇ ಹೊರಗಡೆಯಿಂದ ಕರೆತರುವ ಪ್ರಯತ್ನಕ್ಕೆ ಜಿಲ್ಲಾಡಳಿತ ಯೋಚಿಸುತ್ತಿತ್ತು. ಆದರೆ, ಜಿಲ್ಲಾಡಳಿತಕ್ಕೆ ಕೆಳಹಂತದ ಅಧಿಕಾರಿಗಳೇ ಮಿಸ್ ಗೈಡ್ ಮಾಡಿ ಇಂತಹ ಅಚಾತುರ್ಯಕ್ಕೆ ಕೈಹಾಕಿರೋದು ಕೂಡ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.