ಬಳ್ಳಾರಿ:ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅವರು ಮೇಯರ್ ಹಾಗೂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಪಾಲಿಕೆಯ ಮೇಯರ್, ಉಪಮೇಯರ್ ಸೇರಿದಂತೆ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬಳ್ಳಾರಿ ಪಾಲಿಕೆಯಲ್ಲಿ ನಡೆದಿದೆ. ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರಿಂದು ಪ್ಲಾಸ್ಟಿಕ್ ನಿಷೇಧ ಕುರಿತು ಹೋಟೆಲ್ ಮಾಲೀಕರ ಸಭೆ ಕರೆದಿದ್ದರು.
ಕಾರಣವೇನು?:ಸಭೆಗೆ ಮೇಯರ್, ಉಪಮೇಯರ್, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನೂ ಕರೆಯಲಾಗಿತ್ತು. ಸಭೆಯ ಸಮಯಕ್ಕೆ ಬಂದ ಮೇಯರ್ ಅವರು ಆಯುಕ್ತರಿಗಾಗಿ ಕಾದರು. ಆದರೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಬರಲಿಲ್ಲ. ಆದ್ದರಿಂದ ಮೇಯರ್ ಸಭೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಸಭೆಗೆ ಬಂದ ಆಯುಕ್ತರು, ಮೇಯರ್, ಉಪಮೇಯರ್ ಹಾಗೂ ಸದಸ್ಯರನ್ನು ಕರೆಯದೆಯೇ ಸಭೆ ನಡೆಸಿದರು ಎನ್ನಲಾಗಿದೆ. ಈ ವಿಚಾರದಿಂದ ಕುಪಿತಗೊಂಡ ಮೇಯರ್, ಉಪಮೇಯರ್ ಹಾಗೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದರು.
ಸದಸ್ಯರ ಆರೋಪವೇನು?: ಕಳೆದ ಒಂದು ತಿಂಗಳಿನಿಂದ ಯಾವುದೇ ರೀತಿಯ ಪ್ರಗತಿಯನ್ನು ಕಾಣಲಾಗುತ್ತಿಲ್ಲ. ಇಷ್ಟು ದಿನಗಳಿಂದ ಬದಲಾಗಬಹುದೆಂದು ಕಾದೆವು. ಆದರೆ ಬದಲಾಗಲಿಲ್ಲ. ಯಾವಾಗ ನೋಡಿದರೂ ಆಯುಕ್ತರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಇದೆ ಎನ್ನುತ್ತಾರೆ. ಇಲ್ಲದಿದ್ದರೆ ಪಾಲಿಕೆಯಲ್ಲಿ ಸಭೆ ಇದೆ ಎನ್ನುತ್ತಾರೆ. ಏಕಪಕ್ಷೀಯವಾಗಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ನಿಗದಿತ ಅವಧಿಯಲ್ಲಿ ಸಭೆಯನ್ನು ನಡೆಸುತ್ತಿಲ್ಲ. ವಿನಾಕಾರಣ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಎಂಜಿನಿಯರ್ಗಳಿಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.
ಇದನ್ನೂ ಓದಿ:ಸ್ಮಶಾನಕ್ಕೆ ತೆರಳುವ ದಾರಿ ಬಂದ್.. ರಸ್ತೆ ಮಧ್ಯೆಯೇ ಶವವಿಟ್ಟು ಜನರ ಪ್ರತಿಭಟನೆ
ಗುರುವಾರ ನಾವು ಸಭೆಗೆ 10 ಗಂಟೆಗೆ ಬಂದಿದ್ದು, ಅವರು ಬಂದಿರಲಿಲ್ಲ. 12 ಗಂಟೆ ಸುಮಾರಿಗೆ ಕೆಲ ನಿಮಿಷ ಹೊರಗೆ ಬಂದೆವು, ಅಷ್ಟರಲ್ಲಿ ಆಯುಕ್ತರು ಬಂದು ಸಭೆ ಆರಂಭಿಸಿದ್ದಾರೆ ಎಂದು ಮೇಯರ್ ರಾಜೇಶ್ವರಿ ಸುಬ್ಬರಾಯುಡು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಿಂದ ಹೊರಬಂದ ಆಯುಕ್ತರು ಸಭೆಗೆ ನಿಮಗೆ ಮುಕ್ತ ಆಹ್ವಾನವಿದೆ. ನೀವು ಬಾರದೆ ಹೊರಗಡೆ ಇದ್ದರೆ ಏನು ಮಾಡುವುದು?. ಡಿಸಿಯವರ ಸಭೆಗೆ ಹೋಗಿದ್ದರಿಂದ ನಾನು ಬರುವುದು ತಡವಾಯ್ತು ಎಂದು ಆಯುಕ್ತರು ಹೇಳಿದರು. ಈ ವೇಳೆ ಆಯುಕ್ತೆ ಹಾಗೂ ಕೈ ಸದಸ್ಯರ ನಡುವೆ ಕೆಲ ಸಮಯ ವಾಗ್ವಾದ ನಡೆಯಿತು.