ಬಳ್ಳಾರಿ :ಗಣಿನಾಡು ಬಳ್ಳಾರಿಯ ಜೀನ್ಸ್ ಉತ್ಪನ್ನಗಳು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದೆಯಾದ್ರೂ ಅಂತಹ ಜೀನ್ಸ್ ಉತ್ಪನ್ನಗಳ ಘಟಕಗಳಿಗೀಗ ಕಾರ್ಮಿಕರ ಕೊರತೆ ಎದುರಾಗಿದೆ. ಮೊದಲ ಹಾಗೂ ಎರಡನೇಯ ಕೋವಿಡ್ ಲಾಕ್‌ಡೌನ್ ಎಫೆಕ್ಟ್ನಿಂದಾಗಿ ಬಹುಸಂಖ್ಯಾತ ಜೀನ್ಸ್ ಕಾರ್ಮಿಕರು ಸ್ವಯಂ ಉದ್ಯೋಗದತ್ತ ಮುಖ ಮಾಡಿದ್ದಾರೆ. ಹೀಗಾಗಿ, ಜೀನ್ಸ್ ಉತ್ಪಾದಕ ಘಟಕಗಳು ಕಾರ್ಮಿಕರ ಬವಣೆಯನ್ನ ಎದುರಿಸುವಂತಾಗಿದೆ.
ಬಳ್ಳಾರಿ ಮಹಾನಗರದಲ್ಲಿರುವ ಜೀನ್ಸ್ ಉತ್ಪಾದಕ ಘಟಕಗಳಲ್ಲಿ ಈ ದಿನ ಅಂದಾಜು 40-50 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು. ಮೊದಲ ಲಾಕ್‌ಡೌನ್ ಆಗಿ ಅನ್ಲಾಕ್ ಆದ ಬಳಿಕ ಈ ಜೀನ್ಸ್ ಘಟಕಗಳಲ್ಲಿ ಅಷ್ಟೇ ಪ್ರಮಾಣದ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಎರಡನೇ ಬಾರಿಗೆ ಲಾಕ್‌ಡೌನ್ ಆಗಿ ಅನ್ಲಾಕ್ ಆದ ಬಳಿಕ 40-50 ಮಂದಿ ಕಾರ್ಮಿಕರಿದ್ದ ಈ ಜೀನ್ಸ್ ಘಟಕಗಳಲ್ಲಿ ಕೇವಲ ಆರೇಳು ಮಂದಿ ಕಾರ್ಮಿಕರು ಕೆಲಸ ಮಾಡುವಂತಹ ಪರಿಸ್ಥಿತಿ ಎದುರಾಯಿತು.
ಜೀನ್ಸ್ ಘಟಕಗಳಲ್ಲಿ ಕಾರ್ಮಿಕರ ಕೊರತೆ ಅದಕ್ಕೆ ಬಹುಮುಖ್ಯ ಕಾರಣ ಲಾಕ್‌ಡೌನ್ ಒಂದೆಡೆಯಾದ್ರೆ, ಶತಕ ಬಾರಿಸಿದ ಪೆಟ್ರೋಲ್ ಬೆಲೆ ಇನ್ನೊಂದು ಕಾರಣ. ನೆರೆಯ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ನಾನಾ ಊರುಗಳಿಂದ ಬರುತ್ತಿದ್ದ ಕಾರ್ಮಿಕರು ಜೀನ್ಸ್ ಘಟಕಗಳಲ್ಲಿ ಕೆಲಸ ಮಾಡಲು ಬಾರದೆ ಬೇರೊಂದು ಕೆಲಸದಲ್ಲಿ ನಿರತರಾಗಿದ್ದಾರೆ. ಇದರಿಂದ ಜೀನ್ಸ್ ಘಟಕಗಳಲ್ಲಿ ಕಾರ್ಮಿಕರ ಸಂಖ್ಯೆ ಇಳಿಮುಖವಾಗಿದೆ.
ಉತ್ಪಾದನಾ ಸಾಮರ್ಥ್ಯ ಇಳಿಮುಖ :ಸದ್ಯ ಜೀನ್ಸ್ ಘಟಕಗಳಲ್ಲಿ ಕೇವಲ ಆರೇಳು ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ವಾರದಲ್ಲಿ ಅಂದಾಜು 3,000 ಜೀನ್ಸ್ ಪ್ಯಾಂಟ್ಗಳನ್ನು ತಯಾರಿಸಲಾಗುತ್ತಿತ್ತು. ಆದರೀಗ ಕೇವಲ 500 ಜೀನ್ಸ್ ಪ್ಯಾಂಟ್ಗಳು ಮಾತ್ರ ತಯಾರಾಗುತ್ತಿವೆ. ದಸರಾ, ದೀಪಾವಳಿ, ಯುಗಾದಿ ಸೇರಿದಂತೆ ನಾನಾ ಧರ್ಮೀಯರ ಹಬ್ಬ- ಹರಿ ದಿನಗಳು ಇದೀಗ ಸಾಲು ಸಾಲಾಗಿ ಬರುತ್ತಿರುವುದರಿಂದ ಜೀನ್ಸ್ ಉತ್ಪನ್ನಗಳಿಗೆ ಬಹು ಬೇಡಿಕೆ ಇದೆ. ಆದ್ರೆ, ಕಾರ್ಮಿಕರ ಕೊರತೆಯಿಂದಾಗಿ ನಮ್ಮಲ್ಲಿ ಉತ್ಪಾದನಾ ಸಾಮರ್ಥ್ಯ ಕಡುಮೆಯಾಗುತ್ತಿದೆ ಎನ್ನುತ್ತಾರೆ ಜೀನ್ಸ್ ಘಟಕಗಳ ಮಾಲೀಕರು.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಪೋಲಕ್ಸ್ ಜೀನ್ಸ್ ಘಟಕದ ಕಾರ್ಮಿಕ ಕಾರ್ತಿಕ್, ಜೀನ್ಸ್ ಘಟಕಗಳಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ. ಕೇವಲ ಆರೇಳು ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅಂದಾಜು 40-50 ಮಂದಿ ಕಾರ್ಮಿಕರು ಇದ್ದರು. ಆದ್ರೇ, ಈಗ ಆರೇಳು ಮಂದಿ ಮಾತ್ರ ಇದ್ದೇವೆ. ಕಟ್ ಪೀಸ್ ದರ ಕೂಡ ಹೆಚ್ಚಿಸಿಲ್ಲ. ಅಲ್ಲದೇ, ಪೆಟ್ರೋಲ್ ದರ ಶತಕ ಬಾರಿಸಿದ್ದರಿಂದ ಜೀನ್ಸ್ ಘಟಕಗಳಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ ಎಂದರು.
ವಾಕರ್ ಜೀನ್ಸ್ ಘಟಕದ ಮಾಲೀಕ ಭರತ್ ಜೈನ್ ಮಾತನಾಡಿ, ಜೀನ್ಸ್ ಉತ್ಪನ್ನಗಳು ಬೇರೆ ರಾಜ್ಯಗಳಿಗೆ ರಫ್ತು ಆಗುವುದನ್ನ ಈ ಲಾಕ್‌ಡೌನ್ ತಡೆದಿದೆ. ಕೊರೊನಾದಿಂದಾಗಿ ಜೀನ್ಸ್ ಉತ್ಪನ್ನಗಳ ಮಾರುಕಟ್ಟೆಗೆ ಭಾರೀ ಪೆಟ್ಟು ಬಿದ್ದಿದೆ. ಇದಲ್ಲದೆ ಕಾರ್ಮಿಕರ ಕೊರತೆ ಸಹ ಎದುರಾಗಿದೆ. ಜೀನ್ಸ್ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಬೇರೆ ಬೇರೆ ಕೆಲಸಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ, ಜೀನ್ಸ್ ಘಟಕಗಳು ಅತೀವ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಶಾಸಕಿ ಅಷ್ಟೇ ಅಲ್ಲ, ಸ್ತ್ರೀರೋಗ ತಜ್ಞೆಯೂ ಹೌದು.. ಗರ್ಭಿಣಿಯರಿಗೆ ಕೋವಿಡ್ ಲಸಿಕೆ ನೀಡಿದ ಡಾ. ಅಂಜಲಿ ನಿಂಬಾಳ್ಕರ್..