ಬಳ್ಳಾರಿ: 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದ್ದಕ್ಕೆ ಬಳ್ಳಾರಿ ಜಿಲ್ಲಾ ಪಂಚಾಯಿತಿ ಪ್ರಶಸ್ತಿಗೆ ಪಾತ್ರವಾಗಿದ್ದು, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಮತ್ತು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಹುಬ್ಬಳ್ಳಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಬಳ್ಳಾರಿ ಜಿಪಂ ನೇತೃತ್ವ ವಹಿಸಿರುವ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರಿಗೆ ಪ್ರಶಸ್ತಿ ವಿತರಿಸಿ ಶಹಬ್ಬಾಷ್‍ಗಿರಿ ನೀಡಿದರು. ಬಳ್ಳಾರಿ ಜಿಪಂ ಹಾಲಿ ಸಿಇಒ ನಂದಿನಿ ಕೆ.ಆರ್ ಅವರು ಇದ್ದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಮನರೇಗಾದಡಿ ರಾಜ್ಯ ಮಟ್ಟದ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯ ವಿಚಾರ.
ರಾಜ್ಯದಲ್ಲಿ ಯಾವುದೇ ಜನಪ್ರತಿನಿಧಿಗಳಿಗೆ ಇಲ್ಲದೇ ಇರುವ ಈ ರೀತಿಯ ಪ್ರಶಸ್ತಿ ಸ್ವೀಕರಿಸಿ ಸನ್ಮಾನಿಸಿಕೊಳ್ಳುವ ಅವಕಾಶ ನನಗೆ ಬಂದಿರುವುದು ನನ್ನ ಸುದೈವ. ಮನರೇಗಾ ಅನುಷ್ಠಾನದಲ್ಲಿ ಉತ್ತಮ ಸ್ಪಂದನೆ ನೀಡಿದ ಜಿಲ್ಲೆಯ ಗ್ರಾಮೀಣ ಜನತೆಗೆ, ಜಿಪಂ, ತಾಪಂ, ಗ್ರಾಪಂ ಹಾಗೂ ಎಲ್ಲ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಅವರಿಗೆ ಅಭಿನಂದನೆ ಸಲ್ಲಿಸಿವೆ ಎಂದರು.
ಈ ಪ್ರಶಸ್ತಿಗೆ ಭಾಜನರಾದ ಜಿಪಂ ಡಿಎಂಐಎಸ್ ಶಿವಪ್ರಸಾದ್, ತಾಪಂ ಇಒ ಬಸಪ್ಪ, ಐಇಸಿ ಸಂಯೋಜಕರಾದ ಫಜಿಲ್ ಅಹಮ್ಮದ್, ತಾಂತ್ರಿಕ ಸಂಯೋಜಕರಾದ ವಿಜಯ್ ಮಹಾಂತೇಶ್, ಅಲಬೂರು ಗ್ರಾಪಂ ಪಿಡಿಒ ಮಾಧವಿ ಅವರ ಕಾರ್ಯವಿಧಾನದ ಬಗ್ಗೆ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು ವಿಶೇಷ ಅಭಿನಂದನೆಗಳನ್ನು ತಿಳಿಸಿದರು.
ಇದೇ ರೀತಿಯಾಗಿ 2021-22ನೇ ಸಾಲಿನಲ್ಲಿಯೂ ಮನರೇಗಾ ಅನುಷ್ಠಾನದಲ್ಲಿ ಗ್ರಾಪಂ, ತಾಪಂಗಳು ಸ್ಪರ್ಧಾತ್ಮಕವಾಗಿ ತೆಗೆದುಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು.
ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸರ್ಕಾರದ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕರಿಸಿ ಎಂದು ಹೇಳಿದ ಅವರು ಜಿಲ್ಲೆಯು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯಲಿ ಎಂದು ಆಶಿಸಿದರು.