ಬಳ್ಳಾರಿ:ಗಣಿನಾಡು ಬಳ್ಳಾರಿ ಜಿಲ್ಲೆಯ ಐದು ತಾಲೂಕಿನ 85 ಗ್ರಾಮ ಪಂಚಾಯಿತಿಗಳಲ್ಲಿನ ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ನಡೆಯಿತು. ಇಂದು ಬೆಳಗ್ಗೆ 7 ಗಂಟೆಗೆ ಶುರುವಾದ ಪ್ರಕ್ರಿಯೆಯು ಮಧ್ಯಾಹ್ನದವರೆಗೂ ಕೂಡ ಬಹಳ ಉತ್ಸುಕತೆಯಿಂದ ನಡೆಯಿತು.
ಗಣಿನಾಡು ಬಳ್ಳಾರಿಯಲ್ಲಿ ಮತದಾನ ಮಧ್ಯಾಹ್ನ 3 ಗಂಟೆಯವರೆಗೆ ಶೇಕಡ 69.45 ರಷ್ಟು ಮತದಾನ ಆಗಿರೋದು ವರದಿಯಾಗಿದೆ. ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಲಮಾಮಿಡಿ ಅಭ್ಯರ್ಥಿ ಪದ್ಮಾವತಿ ಅವರ ಚಿಹ್ನೆ ಬದಲಾವಣೆ ಆಗಿರೋದು ಬಿಟ್ಟರೆ ಯಾವುದೇ ಅಹಿತಕರ ಘಟನೆಗಳಿಗೆ ಈ ಚುನಾವಣೆ ಸಾಕ್ಷಿಯಾಗಲಿಲ್ಲ.
ಹೊಸಪೇಟೆ ತಾಲೂಕಿನಲ್ಲಿ ಚುನಾವಣೆ ನಿಮಿತ್ತ ನಿಯೋಜಿಸಲಾಗಿದ್ದ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರಿಗೆ ಲಘು ಹೃದಯಾಘಾತ ಸಂಭವಿಸಿರೋದು ಬಿಟ್ಟರೆ ಬೇರೇನೂ ಅವಾಂತರ ಸೃಷ್ಟಿಯಾಗಲಿಲ್ಲ. ಉಳಿದ ತಾಲೂಕಗಳಾದ ಕಂಪ್ಲಿ, ಕುರುಗೋಡು ಮತ್ತು ಸಿರುಗುಪ್ಪ ತಾಲೂಕಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಲಾದ ಮತಗಟ್ಟೆಗಳಲ್ಲಿ ಶಾಂತಿಯುತವಾಗಿಯೇ ಮತದಾನ ನಡೆಯಿತು.
ಮತ ಚಲಾಯಿಸಲು ಭಾರೀ ಉತ್ಸುಕ ತೋರಿದ ಮಹಿಳೆಯರು:
ಮತದಾನಕ್ಕೆ ಉತ್ಸುಕ ತೋರಿದ ಮಹಿಳೆಯರು ಸತತ ಮೂರೂವರೆ ದಶಕಗಳ ನಂತ್ರ ಅವಿರೋಧ ಆಯ್ಕೆ ಪ್ರಕ್ರಿಯೆಗೆ ಬ್ರೇಕ್ ಹಾಕಿ ಚುನಾವಣಾ ಅಖಾಡಕ್ಕೆ ಧುಮುಕಿರುವ ಬಳ್ಳಾರಿ ತಾಲೂಕಿನ ಕಪ್ಪಗಲ್ಲು ಗ್ರಾಮದ ಗ್ರಾಮಸ್ಥರು ಮತ ಚಲಾಯಿಸಲು ಬಹಳ ಉತ್ಸುಕರಾಗಿದ್ದರು. ಗ್ರಾಮದ ಮೂರು ಕಡೆಗಳಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತುಕೊಂಡೇ ಮತ ಚಲಾವಣೆ ಮಾಡಿದ್ರು. ಪ್ರತಿಯೊಬ್ಬರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡೇ ಮತಗಟ್ಟೆಗಳಿಗೆ ಆಗಮಿಸಿರೋದು ಸರ್ವೇ ಸಾಮಾನ್ಯ ಆಗಿತ್ತು. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡರೇ ಮಾತ್ರ ಮತ ಚಲಾಯಿಸಲು ಅವಕಾಶವನ್ನ ಜಿಲ್ಲಾ ಚುನಾವಣಾ ಆಯೋಗದ ಸಿಬ್ಬಂದಿ ಕಲ್ಪಿಸಿದ್ದರು.
ಇದನ್ನೂ ಓದಿ: ವಿಜಯನಗರ ಜಿಲ್ಲೆ ರಚನೆ ಬೆಂಬಲಿಸಿದ ಅಜಯ್ರಾವ್
ಗ್ರಾಮಾಂತರ ಪ್ರದೇಶದ ಪ್ರತಿಯೊಂದು ಮತಗಟ್ಟೆಯಲ್ಲೂ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಈ ಎಸ್ ಎಂಎಸ್ (ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜಾಗೃತಿಯನ್ನ ಪಿಎಸ್ ಐ ಮಟ್ಟದ ಪೊಲೀಸ್ ಅಧಿಕಾರಿಗಳು ಮೂಡಿಸುತ್ತಿರೋದು ಕೂಡ ಕಂಡುಬಂತು.
ಪಕ್ಕಾ ಗ್ರಾಮೋತ್ಸವ ಇದು:
ಪ್ರತಿಯೊಂದು ಮತಗಟ್ಟೆಗಳ ಮುಂದೆ ನೂರು ಮೀಟರ್ ವ್ಯಾಪ್ತಿಯಲ್ಲಿ ಜನಜಂಗುಳಿಯಿಂದ ಕೂಡಿತ್ತು. ಮತದಾನ ಮಾಡಲಿಕ್ಕೆ ಬರುವ ಮತದಾರರಿಗೆ ಮತ್ತೊಮ್ಮೆ, ಮಗದೊಮ್ಮೆ ಮನವರಿಕೆ ಮಾಡಿ ಕೊಡುವ ಸನ್ನಿವೇಶಗಳು ಸ್ಪರ್ಧಿಸಿದ್ದ ಅಭ್ಯರ್ಥಿಗಳಿಂದ ಕಂಡುಬಂತು.