ಬಳ್ಳಾರಿ: ಗಣಿಜಿಲ್ಲೆಯಲ್ಲಿ ಅಂದಾಜು 90 ಸಾವಿರ ಮಂದಿ ಇಎಸ್ಐಸಿ ಫಲಾನುಭವಿಗಳಿದ್ದು, ಸರಿಸುಮಾರು 7 ಲಕ್ಷಕ್ಕೂ ಅಧಿಕ ಕುಟುಂಬಗಳು ಇದರ ವ್ಯಾಪ್ತಿಗೆ ಒಳಪಡಲಿದ್ದಾರೆ. ಜಿಲ್ಲೆಯಲ್ಲಿ ಸ್ಪಾಂಜ್ ಐರನ್ ಹಾಗೂ ಇನ್ನಿತರೆ ಗಣಿಗಾರಿಕೆ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಕಂಪನಿಗಳು ಕಾರ್ಮಿಕರಿಗೆ ಇಎಸ್ಐಸಿ ಸೌಲಭ್ಯದ ವ್ಯವಸ್ಥೆ ಮಾಡಿವೆಯಾದ್ರೂ ಅದರ ಸೂಕ್ತ ಮಾಹಿತಿ ಕೊರತೆ ಇಲ್ಲಿ ಕಾಣುತ್ತಿದೆ.
ಇದರಿಂದ ಕರ್ನಾಟಕ ರಾಜ್ಯ ವಿಮಾ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಿಗೆ ತಲೆಬಿಸಿಯಾಗಿದೆ. ನಿಯಮಾನುಸಾರ ಚಿಕಿತ್ಸೆ ಪಡೆದುಕೊಂಡು ಇಎಸ್ಐಸಿ ಸೌಲಭ್ಯ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಅತೀ ವಿರಳವಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಆಯಾ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಈ ಸೌಲಭ್ಯದ ಕುರಿತು ಸೂಕ್ತ ಮಾಹಿತಿ ನೀಡದೆ ಇರುವುದು ಎನ್ನಬಹುದು. ಎಷ್ಟೋ ಬಾರಿ ಇಎಸ್ಐಸಿ ಸೌಲಭ್ಯ ವಂಚಿತರು ಜಿಲ್ಲೆಯ ವಿಮಾ ಚಿಕಿತ್ಸಾಲಯದ ವೈದ್ಯಾಧಿಕಾರಿಗಳೊಂದಿಗೆ ಕಾದಾಟಕ್ಕೆ ಇಳಿದ ಪ್ರಸಂಗವೂ ಜರುಗಿದೆ. ಇತ್ತ ಪ್ರತಿಯೊಬ್ಬರಿಗೂ ಸಾವಧಾನವಾಗಿ ಉತ್ತರಿಸಲು ಸಾಧ್ಯವಾಗದೇ ಕೆಲವೊಮ್ಮೆ ವೈದ್ಯಾಧಿಕಾರಿಗಳು ಕೂಡ ಫಲಾನುಭವಿಗಳ ಮೇಲೆ ರೇಗಾಡಿರುವ ಘಟನೆಗಳು ನಡೆದಿವೆ.