ಬಳ್ಳಾರಿ:ಜಿಲ್ಲಾಸ್ಪತ್ರೆಗೆ 2019-20ನೇ ಸಾಲಿನಲ್ಲಿ ಕಾಯಕಲ್ಪ ತಂಡದವರು ಭೇಟಿ ನೀಡಿ, ಆಸ್ಪತ್ರೆಯ ಎಲ್ಲಾ ವಿಭಾಗಗಳ ಕೆಲಸ ಕಾರ್ಯಗಳ ಸಾಧನೆಯನ್ನು ಮೌಲ್ಯಮಾಪನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಈ ಆಸ್ಪತ್ರೆ ಇಡೀ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ.
'ಕಾಯಕಲ್ಪ ಪ್ರಶಸ್ತಿ' ಪಡೆದು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ ಬಳ್ಳಾರಿ ಜಿಲ್ಲಾಸ್ಪತ್ರೆ ಈ ಹಿಂದೆ ಕಾಯಕಲ್ಪ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ತಂಡದವರು ಆಗಾಗ ಆಸ್ಪತ್ರೆಗೆ ಬಂದು ಪರಿಶೀಲಿಸುತ್ತಿದ್ದರು. ಅವರು ನೀಡಿರುವ ಸಲಹೆಯಂತೆ ಕಾರ್ಯನಿರ್ವಹಿಸಿ 2016-17ನೇ ಸಾಲಿನಲ್ಲಿ 6ನೇ ಸ್ಥಾನ, 2017-18 ನೇ ಸಾಲಿನಲ್ಲಿ 2ನೇ ಸ್ಥಾನ ಹಾಗೂ 2018-19ನೇ ಸಾಲಿನಲ್ಲಿ 3ನೇ ಸ್ಥಾನ ಮತ್ತು ಪ್ರಸ್ತುತ 2019-20 ನೇ ಸಾಲಿನಲ್ಲಿ 1ನೇ ಸ್ಥಾನ ಪಡೆದಿದೆ.
ಈ ಪ್ರಶಸ್ತಿ ಸಂದಿರುವುದಕ್ಕೆ ಸಂತಸ ಹಂಚಿಕೊಂಡ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ, ಕಾಯಕಲ್ಪ ತಂಡದವರು ಆಸ್ಪತ್ರೆಯ ಸ್ವಚ್ಛತೆಯನ್ನು ಮೆಚ್ಚಿ ಮೌಲ್ಯಮಾಪನ ಮಾಡಿರುತ್ತಾರೆ. ಆದರೆ ಈಗ ಅವರ ಸಲಹೆ- ಸೂಚನೆಗಳು ಹಾಗೂ ನಿರ್ದೇಶನದಂತೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರದ್ಧೆ ಮತ್ತು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಕ್ಕಾಗಿ ಈ ಆಸ್ಪತ್ರೆಗೆ ಮೊದಲನೇ ಸ್ಥಾನ ದೊರಕಿದೆ ಎಂದರು.
ಬಳ್ಳಾರಿ ಜಿಲ್ಲಾಸ್ಪತ್ರೆ ಈ ಹಿಂದೆ ಸ್ವಾಯತ್ತ ಸಂಸ್ಥೆಯಾದ ವಿಮ್ಸ್ ಆಡಳಿತ ವ್ಯಾಪ್ತಿಯಲ್ಲಿತ್ತು. 2016 ಏ.1ರಿಂದ ಬೇರ್ಪಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇರ್ಪಡೆಯಾಗಿರುತ್ತದೆ. ಅಂದಿನಿಂದ ಈ ಆಸ್ಪತ್ರೆ ಕ್ರಮೇಣವಾಗಿ ಒಂದೊಂದೇ ಸೌಲಭ್ಯ ಪಡೆದು ಅದೇ ರೀತಿಯಾಗಿ ಎಲ್ಲಾ ವರ್ಗದ ಸಿಬ್ಬಂದಿ ಸೇವೆ ಪಡೆದಿದೆ. ಹೀಗೆ ಎಲ್ಲಾ ವಿಭಾಗಗಳ ತಜ್ಞ ವೈದ್ಯರು ಅವರವರ ತಜ್ಞತೆಗೆ ತಕ್ಕಂತೆ ಬೇರೆ ಬೇರೆ ವಿಭಾಗಗಳನ್ನು ಪ್ರಾರಂಭ ಮಾಡಲಾಯಿತು. ಇದರಿಂದ ಬಳ್ಳಾರಿ ಜಿಲ್ಲಾಸ್ಪತ್ರೆಯ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿದೆ ಎಂದು ಅವರು ವಿವರಿಸಿದ್ದಾರೆ.