ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಹಾಮಾರಿ ಕೋವಿಡ್ ಸೋಂಕಿನ ಎರಡನೇ ಅಲೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸನ್ನದ್ಧವಾಗಿದೆ.
ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಕ್ರಮ ಕಳೆದ ವರ್ಷ ಕೋವಿಡ್ ಸೃಷ್ಟಿಸಿದ ಸಮಸ್ಯೆ ಅಷ್ಟಿಷ್ಟಲ್ಲ. ಇನ್ನೇನು ಸೋಂಕು ಪ್ರಕರಣಗಳು ಇಳಿಮುಖ ಕಂಡು ಎಲ್ಲಾ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿವೆ ಎನ್ನುವಷ್ಟರಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾಗಿದೆ. ಇದನ್ನು ನಿಯಂತ್ರಿಸಲು ಸರ್ಕಾರ ಒಂದಿಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜಿಲ್ಲಾಡಳಿತ ಕೂಡ ಶ್ರಮಿಸುತ್ತಿವೆ. ಸೋಂಕಿತರಿಗೆ ಪೂರಕ ವೈದ್ಯಕೀಯ ಸೇವೆ ಒದಗಿಸುವತ್ತ ಆರೋಗ್ಯ ಇಲಾಖೆ ಗಮನ ಹರಿಸಿದೆ.
ಅಗತ್ಯ ಹಾಸಿಗೆಗಳ ವ್ಯವಸ್ಥೆ:
ಬಳ್ಳಾರಿಯ ಟ್ರಾಮಾಕೇರ್ ಸೆಂಟರ್, ವಿಮ್ಸ್ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿಜಯನಗರ - ಬಳ್ಳಾರಿ ಜಿಲ್ಲೆಗಳ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ಗಳನ್ನು ಮಾಡುವುದರ ಜತೆಗೆ ಅಗತ್ಯ ಹಾಸಿಗೆಗಳ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಅಂದಾಜು 1,017 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.
ಆರ್ಟಿಪಿಸಿಆರ್ ಸ್ವ್ಯಾಬ್ ಟೆಸ್ಟಿಂಗ್:
ಪ್ರತಿನಿತ್ಯ 3000ಕ್ಕೂ ಅಧಿಕ ಮಂದಿಯ ಆರ್ಟಿಪಿಸಿಆರ್ ಸ್ವ್ಯಾಬ್ ಟೆಸ್ಟಿಂಗ್ ಸಹ ಮಾಡಲಾಗುತ್ತಿದೆ. ಆ ಪೈಕಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕೆಲವರಿಗೆ ಹೋಂ ಐಶೋಲೇಷನ್ ಮಾಡಲಾಗಿದೆ. ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದವರನ್ನ ಮಾತ್ರ ಐಸಿಯು ವಾರ್ಡುಗಳಲ್ಲಿ ಇರಿಸಲಾಗಿದೆ.
ಉಭಯ ಜಿಲ್ಲೆಗಳಲ್ಲಿ ಈವರೆಗೆ ಅಂದಾಜು 123 ಕ್ಕೂ ಅಧಿಕ ಮಂದಿಯನ್ನು ಟ್ರಾಮಾಕೇರ್ ಸೆಂಟರ್ ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಳ್ಳಾರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಕೋವಿಡ್ ಸೋಂಕಿತರನ್ನು ದಾಖಲಿಸಲಾಗಿದೆ.
ಖಾಸಗಿ ಆಸ್ಪತ್ರೆಯಿಂದ ಕೋವಿಡ್ ಚಿಕಿತ್ಸೆ:
ಬಳ್ಳಾರಿ ನಗರದ 3-4 ಖಾಸಗಿ ಆಸ್ಪತ್ರೆಗಳು ಹಾಗೂ ಹೊಸಪೇಟೆಯಲ್ಲಿ 2 ಖಾಸಗಿ ಆಸ್ಪತ್ರೆಗಳು ಈ ಕೋವಿಡ್ ಸೋಂಕಿತರ ಸೇವೆಗೆ ಮುಂದಾಗಿವೆ. ರಾಜ್ಯ ಸರ್ಕಾರ ನಿಗದಿಪಡಿಸಿದ ದರದಲ್ಲೇ ಈ ಖಾಸಗಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ.
ಡಿಹೆಚ್ಒ ಪ್ರತಿಕ್ರಿಯೆಯೇನು?
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಡಿಹೆಚ್ಒ ಡಾ. ಹೆಚ್.ಎಲ್. ಜನಾರ್ದನ, ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದು, ಅಂದಾಜು 1,017 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಆ ಪೈಕಿ ಅಂದಾಜು 180 ಐಸಿಯು ವಾರ್ಡ್ಗಳಿವೆ. ಉಳಿದಂತೆ ಸಾಮಾನ್ಯ ವರ್ಗದ ಹಾಸಿಗೆಗಳಾಗಿವೆ. ಮಾರ್ಚ್ 20ರ ನಂತರ ಕೋವಿಡ್ ಎರಡನೇ ಅಲೆ ಶುರುವಾಗಿದೆ. ಈವರೆಗೂ ಅಂದಾಜು ನಾಲ್ಕಾರು ಮಂದಿ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ್ದಾರೆ ಎಂದರು.
ಇದನ್ನೂ ಓದಿ:ತುಮಕೂರು ಜಿಲ್ಲೆಯಲ್ಲಿ 2 ಲಕ್ಷ ಮಂದಿಗೆ ಕೋವಿಡ್ ವ್ಯಾಕ್ಸಿನ್
9 ಮಂದಿ ಐಸಿಯು ವಾರ್ಡ್ನಲ್ಲಿದ್ದಾರೆ. ಕೋವಿಡ್ ವಾಕ್ಸಿನ್ ಪಡೆದವರ ಪೈಕಿ ಐಸಿಯು ವಾರ್ಡ್ಗೆ ಹೋಗಿರೋದು ಬಹಳ ಕಮ್ಮಿ. ಹೀಗಾಗಿ, 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೂಡ ಕೋವಿಡ್ ವ್ಯಾಕ್ಸಿನ್ ಅನ್ನು ಕಡ್ಡಾಯವಾಗಿ ಪಡೆಯಲೇಬೇಕು. ಮುಂದಿನ 2-3 ತಿಂಗಳಲ್ಲಿ ಕೋವಿಡ್ ಎರಡನೇಯ ಅಲೆಯು ಬಹಳವೇ ಕ್ರೂಷಿಯಲ್ ಅಗಿರುತ್ತದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸೋದು ಹಾಗೂ ಸ್ಯಾನಿಟೈಜರ್ ಧರಿಸೋದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.