ಬಳ್ಳಾರಿ:ಕೊರೊನಾದಿಂದ ಮೃತಪಟ್ಟ ವೃದ್ಧೆಯ ಶವವನ್ನು ಆಸ್ಪತ್ರೆಯಿಂದ ವಾಹನಕ್ಕೆ ವರ್ಗಾವಣೆ ಮಾಡಿದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ದೇವರಾಜ್ ಅವರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ 100 ಹಾಸಿಗೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಗುಲಿದ ವೃದ್ಧೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಹಲವು ದಿನ ಚಿಕಿತ್ಸೆ ಪಡೆದ ಬಳಿಕವೂ ವೃದ್ಧೆಯು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ವೃದ್ಧೆಯ ಶವವನ್ನು ಚಿಕಿತ್ಸಾ ಕೊಠಡಿಯಿಂದ ಸಾಗಿಸಬೇಕಿತ್ತು. ಆದರೆ ಆಕೆಯ ಕುಟುಂಬಸ್ಥರು ಮತ್ತು ಬಂಧುಗಳು ಯಾರು ಆಕೆಯ ದೇಹವನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದರು. ತುಂಬಾ ಸಮಯ ಕಳೆದರೂ ಯಾರೊಬ್ಬರೂ ಶವ ಸಾಗಿಸಲು ಬಾರದೆ ಅವರಿವರ ಹೆಸರು ಹೇಳಿ ಸಮಯ ಕಳೆಯತೊಡಗಿದ್ದರು. ವೃದ್ಧೆ ಮೃತಪಟ್ಟ ಕಾರಣ ಬೆಡ್ ಖಾಲಿಯಾಗಿ ಹೊಸ ರೋಗಿಗೆ ಬೆಡ್ನ ಅವಶ್ಯಕತೆಯಿತ್ತು. ಹಾಗಾಗಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ದೇವರಾಜ್ ತಾವೇ ಸ್ವತಃ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕರ ಸಹಾಯದೊಂದಿಗೆ ವೃದ್ಧೆಯ ಶವವನ್ನು ಕೊರೊನಾ ವಾರ್ಡ್ನಿಂದ ಕೆಳಗಿನ ವಾಹನ ನಿಲ್ದಾಣದ ಆವರಣಕ್ಕೆ ತಂದು ಅಲ್ಲಿದ್ದ ಅವರ ಕುಟುಂಬಸ್ಥರ ಇನ್ನೊಂದು ವಾಹನಕ್ಕೆ ವರ್ಗಾಯಿಸಿ ಮಾನವೀಯತೆ ಮೆರೆದಿದ್ದಾರೆ.