ಬಳ್ಳಾರಿ:ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳ ‘ನಡೆ ಹಳ್ಳಿ ಕಡೆ’ ಎಂಬ ನೂತನ ಕಾರ್ಯಕ್ರಮವನ್ನ ಸರ್ಕಾರ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮಾರ್ಚ್ 20ರಂದು ಸಿರಗುಪ್ಪ ತಾಲೂಕಿನ ಕರೂರು ಹೋಬಳಿಯ ಉತ್ತನೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಜಿಲ್ಲಾಧಿಕಾರಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಾಥ್ ನೀಡಲಿದ್ದು, ಗ್ರಾಮ ವಾಸ್ತವ್ಯದಲ್ಲಿ ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಜಿಲ್ಲಾಧಿಕಾರಿಗಳ ರೀತಿಯಲ್ಲೇ ವಿವಿಧ ತಾಲೂಕುಗಳಲ್ಲಿ ಆಯಾ ತಾಲೂಕಿನ ತಹಶೀಲ್ದಾರರು ಹಾಗೂ ಅಧಿಕಾರಿಗಳು ಗ್ರಾಮ ವಾಸ್ತವ್ಯ ನಡೆಸಿ, ಜನರ ಸಮಸ್ಯೆಗಳಿಗೆ ದನಿಯಾಗಲಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಜನರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ನಂತರ ಗ್ರಾಮೀಣ ಪ್ರತಿಭೆ ಹಾಗೂ ಕಲೆಗೆ ಪ್ರೋತ್ಸಾಹಿಸಲು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ.
ಗ್ರಾಮ ವಾಸ್ತವ್ಯದಲ್ಲಿ ಕೈಗೊಳ್ಳಲಾಗುವ ಕ್ರಮಗಳು:
ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮದಲ್ಲಿನ ಎಲ್ಲ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ 3 ಮತ್ತು ಆಕಾರ ಬಂದ್ ತಾಳೆ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಎಲ್ಲಾ ಪಹಣಿಗಳಲ್ಲಿಯೂ ಕೂಡ ಕಾಲಂ 3 ಮತ್ತು ಕಾಲಂ 9 ತಾಳೆ ಆಗುತ್ತವೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಖಚಿತಪಡಿಸಿಕೊಳ್ಳುವುದು. ಲೋಪಗಳು ಕಂಡು ಬಂದಿರುವ ಪ್ರಕರಣಗಳನ್ನು ಗುರುತಿಸಿ ವಿಲೇವಾರಿ ಮಾಡಲು ಆದೇಶ ಹೊರಡಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದು.
ಗ್ರಾಮದಲ್ಲಿನ ಪಹಣಿಗಳನ್ನು ಪರಿಶೀಲಿಸಿ, ಪೌತಿ ಪ್ರಕರಣಗಳನ್ನು ಗುರುತಿಸಿ ನೈಜ ವಾರಸುದಾರರ ಹೆಸರುಗಳಿಗೆ ಖಾತೆ ಬದಲಾವಣೆ ಮಾಡುವ ಬಗ್ಗೆ ಪೌತಿ ಆದೇಶಗಳನ್ನು ಸಿದ್ದತೆಯಲ್ಲಿಟ್ಟುಕೊಳ್ಳವುದು. ಗ್ರಾಮದ ಎಲ್ಲ ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಿಂಚಣಿ ಸೌಲಭ್ಯ ಪಡೆಯದೇ ಇರುವವರಿಂದ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ, ಅರ್ಹ ಪ್ರಕರಣಗಳಿಗೆ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳ ಸಮಕ್ಷಮ ಆದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು.
ಬರ/ಪ್ರವಾಹ ಇದ್ದಲ್ಲಿ ಬರ ಪರಿಸ್ಥಿತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ನಿತ್ಯ ಕುಡಿಯುವ ನೀರಿನ ತೊಂದರೆ ಬಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿ, ಸಮಸ್ಯೆ ಇದ್ದಲ್ಲಿ ಟ್ಯಾಂಕರ್ ಮೂಲಕ ಅಥವಾ ಖಾಸಗಿ ಬೋರವೆಲ್ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ನೀರು ಸರಬರಾಜು ಮಾಡಲು ಕ್ರಮ ವಹಿಸುವುದು. ಪ್ರವಾಹ ಪರಿಸ್ಥಿತಿ ಉದ್ಭವಿಸಿದಲ್ಲಿ ವಿವಿಧ ಹಾನಿಗಳಿಗೀಡಾದ ಸಂತ್ರಸ್ತರಿಗೆ ಎಸ್.ಡಿ.ಅರ್.ಎಫ್. ಮಾರ್ಗಸೂಚಿಯ ಪ್ರಕಾರ ಪರಿಹಾರ ನೀಡಲು ಬೇಕಾಗುವ ಎಲ್ಲ ತರಹದ ದಾಖಲೆಗಳನ್ನು ಗ್ರಾಮ ಮಟ್ಟದಲ್ಲಿ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ನಿಗದಿತ ಸಮಯದಲ್ಲಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಿ, ಪರಿಹಾರ ನೀಡಲು ಕ್ರಮ ವಹಿಸುವುದು.
ಗುಡಿಸಲು ರಹಿತ ವಾಸದ ಮನೆಗಳ ನಿರ್ಮಾಣ:
ಗ್ರಾಮಗಳಿಗೆ ಭೇಟಿ ನೀಡಿದ ಸಮಯದಲ್ಲಿ ಗುಡಿಸಲುಗಳು ಇರುವ ವಾಸದ ಮನೆಗಳನ್ನು ಪತ್ತೆಹಚ್ಚಿ ಲಭ್ಯವಿರುವ ಸರ್ಕಾರದ ವಿವಿಧ ಯೋಜನೆಗಳಡಿ ಮನೆಕಟ್ಟಲು ಅನುದಾನ ನೀಡುವಂತೆ ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಿಗೆ ನಿರ್ದೇಶನ ನೀಡಿ, ಆ ಗ್ರಾಮದ ಗುಡಿಸಲು ರಹಿತ ವಾಸದ ಮನೆ ನಿರ್ಮಾಣ ಮಾಡಲು ಕ್ರಮ ವಹಿಸುವುದು. ಜೊತೆಗೆ ಗ್ರಾಮದಲ್ಲಿನ ಇತರೆ ಕುಂದು-ಕೊರತೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳಲಾಗುತ್ತದೆ. ಒಂದು ವೇಳೆ ಸ್ಮಶಾನಕ್ಕೆ ಜಮೀನು ಅಗತ್ಯವಿದ್ದಲ್ಲಿ ಮೊದಲಿಗೆ ಸರ್ಕಾರಿ ಜಮೀನನ್ನು ಗುರುತಿಸುವುದು. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ, ಖಾಸಗಿ ಜಮೀನು ಗುರುತಿಸಿ ಸೂಕ್ತ ಪ್ರಸ್ತಾವನೆ ಸಲ್ಲಿಸುವುದು. ಗ್ರಾಮದ ಆಶ್ರಯ ಯೋಜನೆಗೆ ಅವಶ್ಯಕತೆ ಇದ್ದಲ್ಲಿ ಲಭ್ಯ ಜಮೀನು ಕಾಯ್ದಿರಿಸಲು ಕ್ರಮವಹಿಸುವುದು.
ಓದಿ:ಮಾತು ಬರಲ್ಲ.. ಕಿವಿಯೂ ಕೇಳಲ್ಲ.. ಆ ಅನಾಥೆಗೆ ಠಾಣೆಯೇ ಸೂರು, ಪೊಲೀಸರೇ ಆಸರೆ!