ಬಳ್ಳಾರಿ: ತುಂಗಾ ಜಲಾಶಯದ ಹೊರ ಹರಿವು 70 ಸಾವಿರ ಕ್ಯೂಸೆಕ್ ಇದ್ದು, ಹೆಚ್ಚು ಮಳೆಯಾಗುತ್ತಿರುವುವರಿಂದ ಜಲಾಶಯದಿಂದ ನೀರು ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನ, ಜಾನುವಾರುಗಳಿಗೆ ಹಾನಿಯಾಗದಂತೆ ಅಪಾಯದಲ್ಲಿರುವ ಗ್ರಾಮಗಳಿಗೆ ತಹಶೀಲ್ದಾರ್ ನೇತೃತ್ವದ ತಂಡಗಳು ಭೇಟಿ ನೀಡಿ ವಿಸ್ತೃತ ವರದಿ ನೀಡಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಖಡಕ್ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ತಹಶೀಲ್ದಾರ್ ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಸಿರುಗುಪ್ಪ, ಹೊಸಪೇಟೆ ಮತ್ತು ಕಂಪ್ಲಿ ತಾಲೂಕಿನ ನದಿ ಪಾತ್ರದ ಗ್ರಾಮಗಳಿಗೆ ನೀರಿನಿಂದ ಹಾನಿಯಾಗಲಿದೆ. ತೀವ್ರ ಮತ್ತು ಮದ್ಯಮ ಅಪಾಯದಲ್ಲಿರುವ ಗ್ರಾಮಗಳಿಗೆ ತಹಶೀಲ್ದಾರ್, ಪಿಎಸ್ಐ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
32 ಕಾಳಜಿ ಕೇಂದ್ರಗಳ ಗುರುತು:
ಜಿಲ್ಲೆಯಲ್ಲಿ ಕಾಳಜಿ ಕೇಂದ್ರಗಳನ್ನು ಎರಡು ಭಾಗಗಳಾಗಿ ಮಾಡಲಾಗಿದ್ದು, 32 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಸದರಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಎಸ್ಡಿಆರ್ಎಫ್ ಅಡಿ ಒದಗಿಸಲಾಗುವುದು. ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವುದರಿಂದ ಕಾಳಜಿ ಕೇಂದ್ರದಲ್ಲಿ ಕೊರೊನಾ ಲಕ್ಷಣಗಳಿರುವವರನ್ನು ಪ್ರತ್ಯೇಕವಾಗಿ ಇರಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಡಿಸಿ ನಕುಲ್ ಸೂಚನೆ ನೀಡಿದರು.