ಬಳ್ಳಾರಿ: ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ವಿವಿಧ ಸ್ವಯಂಸೇವಾ ಸಂಸ್ಥೆಗಳು ಮತ್ತು ಸಂಘ - ಸಂಸ್ಥೆಗಳು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೇಳಿದರು.
ಕೋವಿಡ್ 2ನೇ ಅಲೆ ತಡೆಗೆ ಜಿಲ್ಲಾಡಳಿತದೊಂದಿಗೆ ಸಂಘ-ಸಂಸ್ಥೆಗಳು ಕೈಜೋಡಿಸಿ: ಡಿಸಿ ಮಾಲಪಾಟಿ ಮನವಿ
ಕೋವಿಡ್-19 ಕುರಿತು ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಭೆ. ಕೋವಿಡ್ 2ನೇ ಅಲೆ ತಡೆಗೆ ಜಿಲ್ಲಾಡಳಿತದೊಂದಿಗೆ ಸಂಘ - ಸಂಸ್ಥೆಗಳು ಕೈಜೋಡಿಸಿ ಎಂದು ಡಿಸಿ ಮಾಲಿಪಾಟಿ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಬಳ್ಳಾರಿ ನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಎರಡನೆ ಅಲೆ ತಡೆಗಟ್ಟಲು ವಿವಿಧ ಸಂಘ ಸಂಸ್ಥೆಗಳು ಬಳ್ಳಾರಿ ನಗರದ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಕೋವಿಡ್ ಲಸಿಕೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಿ ಎಂದರು. ನಗರದ ವಿವಿಧ ವಾರ್ಡ್‍ಗಳಲ್ಲಿ 18 ರಿಂದ 45 ವಯಸ್ಸಿನವರಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಹಮ್ಮಿಕೊಳ್ಳಲು ಎಲ್ಲ ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಿದರು.
ಕಳೆದ ವರ್ಷ ಕೋವಿಡ್-19 ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಕೋವಿಡ್ ಸೋಂಕು ತಡೆಗಟ್ಟಲು ಹಾಗೂ ಜಿಲ್ಲಾಡಳಿತ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಜವಾಬ್ದಾರಿ ಮೆರೆದಿದ್ದೀರಿ ಎಂದು ಅಭಿನಂದನೆ ವ್ಯಕ್ತಪಡಿಸಿದ ಡಿಸಿ ಮಾಲಪಾಟಿ ಅವರು ಈ ಬಾರಿಯೂ ಅದೇ ರೀತಿ ಕೈಜೋಡಿಸಿ ಕೋವಿಡ್ 2ನೇ ಅಲೆ ತಡೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಜಿಲ್ಲಾ ಪಂಚಾಯಿತಿಯ ಸಿಇಒ ಕೆ.ಆರ್.ನಂದಿನಿ, ಸಹಾಯಕ ಆಯುಕ್ತರಾದ ರಮೇಶ್ ಕೋನರೆಡ್ಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್ ಹಾಗೂ ಬಳ್ಳಾರಿ ನಗರದ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸ್ವಯಂಸೇವಕರು ಇದ್ದರು.