ಬಳ್ಳಾರಿ:ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆ ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನು ಲಾಕ್ಡೌನ್ ಮಾಡಲು ಆಗಲ್ಲವೆಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನ ಜುಬಿಲಂಟ್ ಕಾರ್ಖಾನೆ ಸಣ್ಣ ಪ್ರಮಾಣದ ಉತ್ಪಾದನೆ ಹೊಂದಿದೆ. ಇದಲ್ಲದೆ, ಅದು ಕೇವಲ 1000 ನೌಕರರನ್ನ ಮಾತ್ರ ಹೊಂದಿದೆ. ಹೀಗಾಗಿ, ಕಾರ್ಖಾನೆಯನ್ನ ಲಾಕ್ಡೌನ್ ಮಾಡಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ಸೊನ್ನೆಗೆ ತರಲಾಯಿತು. ಆದರೆ, ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ಸುಮಾರು 30 ಸಾವಿರ ನೌಕರರನ್ನ ಹೊಂದಿದೆ. ಮೇಲಾಗಿ, ಉತ್ಪಾದನಾ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಈ ಕಾರ್ಖಾನೆಯನ್ನ ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಪ್ರಕಾರ ಲಾಕ್ಡೌನ್ ಮಾಡಲು ಬರೋದಿಲ್ಲ ಎಂದ್ರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ನಾಳೆ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಬಳಿಕ, ಸಚಿವರು ಜಿಂದಾಲ್ ಸಮೂಹ ಸಂಸ್ಥೆಯ ಮುಖ್ಯಸ್ಥರೊಂದಿಗೆ ತುರ್ತು ಸಭೆ ಕೈಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಏನೇನು ನಿರ್ಧಾರಗಳು ಆಗುತ್ತವೆ ಎಂಬುದನ್ನ ಕಾದು ನೋಡೋಣವೆಂದ್ರು.