ಬಳ್ಳಾರಿ:ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣಾ ಪ್ರಚಾರದ ವೇಳೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಡಿ ಅಭ್ಯರ್ಥಿಗಳ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ ಮಹಾನಗರದ 20ನೇ ವಾರ್ಡಿನ ಹುಸೇನ್ ನಗರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಕಿಟ್ಟಿ (ಕೃಷ್ಣ) ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿ.ವಿವೇಕ ಪ್ರಚಾರದ ವೇಳೆ ಕೋವಿಡ್ ನಿಯಮ ಪಾಲಿಸಿಲ್ಲ. ಹೀಗಾಗಿ ಅವರ ವಿರುದ್ಧ ಆರ್ಒ ನಾಗರಾಜ ಕೇಸು ದಾಖಲಿಸಿದ್ದಾರೆ.
ಘಟನೆಯ ವಿವರ
ನಿನ್ನೆ ಬೆಳಿಗ್ಗೆ 11.30ರ ಸುಮಾರಿಗೆ ಉಭಯ ಪಕ್ಷದ ಅಭ್ಯರ್ಥಿಗಳು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡಿದ್ದರು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ನಿಗದಿಪಡಿಸಿದ ಬೆಂಬಲಿಗರಿಗಿಂತಲೂ ಹೆಚ್ಚು ಮಂದಿಯನ್ನು ಸೇರಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಜೊತೆ ಕೋವಿಡ್ ನಿಯಮವನ್ನೂ ಪಾಲಿಸಿಲ್ಲ ಎಂದು ದೂರಿನಲ್ಲಿ ಆರ್ಒ ನಾಗರಾಜ ಉಲ್ಲೇಖಿಸಿದ್ದಾರೆ.
ಅಭ್ಯರ್ಥಿಗಳ ವಿರುದ್ಧ ಕೋವಿಡ್ ಉಲ್ಲಂಘನೆ ಪ್ರಕರಣ ದಾಖಲಾಗಿರುವುದರ ಬಗ್ಗೆ ಗಾಂಧಿ ನಗರ ಠಾಣೆಯ ಸಿಪಿಐ ನಿರಂಜನ ಈಟಿವಿ ಭಾರತಗೆ ಸ್ಪಷ್ಟಪಡಿಸಿದ್ದಾರೆ.