ಬಳ್ಳಾರಿ: ಮಹಾನಗರದ ಯಾವುದೇ ವಾರ್ಡ್, ಕಾಲೋನಿ ಅಥವಾ ಓಣಿಯಲ್ಲಿ ನೋಡಿದರೂ ಈ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇವುಗಳ ಸಂಖ್ಯೆ ಬರೋಬ್ಬರಿ 20 ಸಾವಿರದ ಗಡಿ ದಾಟಿದೆ. ಆದರೆ ಈವರೆಗೂ ಕೂಡ ಈ ಬೀದಿ ನಾಯಿಗಳ ಸಮೀಕ್ಷೆ ಕಾರ್ಯವೇ ನಡೆದಿಲ್ಲವಂತೆ.
ಓದಿ: ಡ್ರಗ್ಸ್ ಪ್ರಕರಣ: ಆದಿತ್ಯ ಆಳ್ವ ಸೇರಿದಂತೆ ಐವರಿಗೆ ಜಾಮೀನು
ಬಳ್ಳಾರಿ ಮಹಾನಗರದಲ್ಲಿರುವ ನಾನಾ ಗಲ್ಲಿ, ಕಾಲೋನಿ ಅಥವಾ ವಾರ್ಡ್ ಹಾಗೂ ಓಣಿಗಳಲ್ಲಿ ಈ ಬೀದಿ ನಾಯಿಗಳು ಕಾಣಸಿಗುತ್ತವೆ. ಅವುಗಳು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡೆತಡೆ ಉಂಟು ಮಾಡುವುದು ಒಂದೆಡೆಯಾದರೆ, ಮತ್ತೊಂದೆಡೆ ವಾಹನಗಳಿಗೆ ಸಿಕ್ಕಿ ಸಾವನ್ನಪ್ಪುವ ದೃಶ್ಯವಂತೂ ಸರ್ವೇ ಸಾಮಾನ್ಯವಾಗಿಬಿಟ್ಟಿದೆ.
ಹಾಗಾಗಿ ಅದೆಷ್ಟೋ ನಾಯಿಗಳು ಸಾವನ್ನಪ್ಪಿರುವುದು ಕೂಡ ಇಲ್ಲಿ ಬೆಳಕಿಗೆ ಬರುತ್ತೆ. ಅರೆಬರೆ ಗಾಯಗೊಂಡು ನಡು ರಸ್ತೆ ಅಥವಾ ನಿರ್ಜನ ಪ್ರದೇಶದಲ್ಲಿ ನರಳಾಟ-ಚೀರಾಟ ಕೂಡ ಕಾಣಸಿಗುತ್ತೆ. ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆಯಂತೂ ದೂರದ ಮಾತಾಗಿದೆ. ಕಳೆದ 13 ವರ್ಷ ಕಳೆದರೂ ಕೂಡ ಈ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆದಿಲ್ಲ. ಇದರಿಂದಲೂ ಕೂಡ ಬೀದಿ ನಾಯಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಅಂದಾಜಿನ ಪ್ರಕಾರ ಬರೋಬ್ಬರಿ 20 ಸಾವಿರಕ್ಕೂ ಅಧಿಕ ಬೀದಿ ನಾಯಿಗಳು ಇರಬಹುದೆಂಬ ಮಾಹಿತಿ ಕೂಡ ಲಭ್ಯವಾಗಿದೆ. 2007ನೇ ಇಸವಿಯಲ್ಲಿ ಈ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದು ಬಿಟ್ಟರೆ ಈವರೆಗೂ ಬಳ್ಳಾರಿ ಮಹಾನಗರದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಯೇ ನಡೆದಿಲ್ಲ. ಅದಕ್ಕೆ ಮಹಾನಗರ ಪಾಲಿಕೆ ಇಚ್ಛಾಶಕ್ತಿ ಕೊರತೆ, ಸ್ವಜನ ಪಕ್ಷಪಾತ, ಭಾರೀ ಭ್ರಷ್ಟಾಚಾರ ಹಾಗೂ ತೀವ್ರ ತೆರನಾದ ಹಿಂಸಾತ್ಮಕ ಕೃತ್ಯವೇ ಕಾರಣ ಎಂಬ ಆರೋಪ ಕೂಡ ಕೇಳಿ ಬಂದಿದೆ.