ಕರ್ನಾಟಕ

karnataka

ETV Bharat / state

ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಿಯ ಅದ್ಧೂರಿ ಸಿಡಿಬಂಡಿ ರಥೋತ್ಸವ.. ಹರಿದುಬಂದ ಭಕ್ತಸಾಗರ

ಶ್ರೀಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವ- ಸಾವಿರಾರು ಜನ ಭಾಗಿ - ಹರಕೆ ತೀರಿಸಿದ ಭಕ್ತರು

Sidibandi Rathotsava
ಸಿಡಿಬಂಡಿ ರಥೋತ್ಸವ

By

Published : Mar 1, 2023, 7:34 AM IST

Updated : Mar 1, 2023, 12:45 PM IST

ಶ್ರೀಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವ

ಬಳ್ಳಾರಿ :ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶಾದ್ಯಂತ ಭಕ್ತರನ್ನು ಹೊಂದಿರುವ ಬಳ್ಳಾರಿ ನಗರದ ಆದಿದೇವತೆ ಶ್ರೀಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವವು ಮಂಗಳವಾರ ಸಂಭ್ರಮ, ಶ್ರದ್ಧಾ, ಭಕ್ತಿಯಿಂದ ಜರುಗಿತು. ಕರ್ನಾಟಕ, ಆಂಧ್ರದ ವಿವಿಧ ಜಿಲ್ಲೆಗಳಿಂದ ಹಾಗೂ ಬಳ್ಳಾರಿ ನಗರ ಗ್ರಾಮೀಣ ಪ್ರದೇಶಗಳಿಂದ ಬಂದಿದ್ದ ಸಾವಿರಾರು ಜನರು ಸಿಡಿಬಂಡಿ ರಥೋತ್ಸವದ ಪ್ರದಕ್ಷಿಣೆಯ ದರ್ಶನ ಪಡೆದು ಪುನೀತರಾದರು.

ಗಣಿನಾಡು ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಿಯ ಸಿಡಿಬಂಡೆ ಜಾತ್ರೆಗೆ ಹಣ್ಣು-ಕಾಯಿಯನ್ನು ಎಸೆಯುವುದರ ಜೊತೆಗೆ ಭಕ್ತರು ಹರಕೆ ರೂಪದಲ್ಲಿ ಜೀವಂತ ಕೋಳಿಗಳನ್ನೇ ಎಸೆಯುವುದು ಇಲ್ಲಿನ ವಾಡಿಕೆ. ದೇವಿಯ ಸಿಡಿಬಂಡಿ ಬಳಿ ಸಮೀಪ ಆಗಮಿಸಿ ಕೋಳಿ ಎಸೆದು ಹಿಂದುರುಗಿ ನೋಡದೇ ಹಾಗೆ ಮುಂದೆ ಹೋಗುತ್ತಾರೆ. ಕೋಳಿ ಎಸೆಯುವವರೆಗೂ ಇದು ಭಕ್ತರದ್ದು, ಹರಕೆ ತೀರಿಸಿದ ಬಳಿಕ ಆ ಕೋಳಿ ಹಿಡಿಯಲು ಸ್ಥಳೀಯರು ಹರಸಾಹಸ ಪಡುತ್ತಾರೆ.

ಈ ವರ್ಷವೂ ಕೂಡ ಹಲವು ಜನ ಭಕ್ತರು ಸಿಡಿಬಂಡಿ ಜಾತ್ರೆ ಸಂದರ್ಭದಲ್ಲಿ ನೂರಾರು ಕೋಳಿಗಳನ್ನು ಎಸೆದು ಹಾರಿಬಿಡುವ ದೃಶ್ಯ ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಮುಂಭಾಗ ಜರುಗಿದ ಸಿಡಿಬಂಡಿ ರಥೋತ್ಸವದಲ್ಲಿ ಕಂಡುಬಂತು. ಈ ಜಾತ್ರೆಯಲ್ಲಿ ಕೇವಲ ಕೋಳಿಗಳನ್ನು ಎಸೆಯುವುದು ಮಾತ್ರವಲ್ಲ. ಇಲ್ಲಿನ ಸಿಡಿಬಂಡಿ ರಥೋತ್ಸವವನ್ನು ಎಳೆಯುವುದು ಕೂಡ ಅಷ್ಟೇ ವಿಶೇಷ ಮತ್ತು ವಿಭಿನ್ನವಾಗಿರುತ್ತೆ.

ಸಿಡಿಬಂಡಿ ಎಳೆಯುವ ಮೂರು ಜೋಡಿ ಎತ್ತುಗಳು :ಯಾವುದೇ ತೇರು ಅಥವಾ ರಥವನ್ನು ಭಕ್ತರು ಎಳೆದರೆ ಕನಕ ದುರ್ಗಮ್ಮ ದೇವಿಯ ಸಿಡಿಬಂಡಿಯನ್ನು ಎಳೆಯುವುದು ಮೂರು ಜೋಡಿ ಎತ್ತುಗಳು ಮಾತ್ರ. ಈ ಮೂರು ಜೋಡಿ ಎತ್ತುಗಳನ್ನು ಬಳ್ಳಾರಿಯ ಕೌಲ್‍ಬಜಾರಿನಲ್ಲಿರುವ ಗಾಣಿಗ ಸಮುದಾಯದ ಕುಟುಂಬದವರ ಮನೆಯಿಂದ ಸಿಂಗರಿಸಿಕೊಂಡು ಪೂಜೆ ಸಲ್ಲಿಸಿ ಒಂದು ದಿನ ಮೊದಲೇ, ಅಂದರೆ ಸೋಮವಾರದಂದು ಮೆರವಣಿಗೆ, ತಾಳವಾದ್ಯಗಳ ಮೂಲಕ ಕರೆ ತಂದು ದೇವಸ್ಥಾನದ ಬಳಿ ನಿಲ್ಲಿಸಲಾಗುತ್ತದೆ. ಮಂಗಳವಾರ ಸಿಡಿಬಂಡಿ ರಥೋತ್ಸವದ ದಿನ ಮತ್ತೆ ಎತ್ತುಗಳು ಹಾಗೂ ಸಿಡಿಬಂಡಿಯನ್ನು ಸಿಂಗಾರಗೊಳಿಸಿ ಸಿಡಿಬಂಡಿಯನ್ನು ಎಳೆಯಲಾಗುತ್ತದೆ.

ಪ್ರತಿ ವರ್ಷದಂತೆ ಕೂಡ 40 ಅಡಿ ಎತ್ತರದ ಮರದ ದಿನ್ನೆಗೆ ಗೊಂಬೆಯನ್ನು ಕಟ್ಟಿ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಗರದ ಹೃದಯ ಭಾಗದಲ್ಲಿರುವ ದೇವಿಯ ಆವರಣದಲ್ಲಿ ಜರುಗುವ ಈ ಸಿಡಿಬಂಡಿಯನ್ನು ನೋಡಲು ಒಂದು ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ವಿವಿಧ ರಾಜ್ಯಗಳಿಂದ ಬಂದವರು ಸಿಡಿಬಂಡೆ ಜಾತ್ರೆ ನೋಡಿ ಪುನೀತರಾದರು. ಜಾತ್ರೆ ವೇಳೆ ಕತ್ತಲಾಗುತ್ತಿದ್ದಂತೆ ಭಕ್ತರೆಲ್ಲ ತಮ್ಮ ಮೊಬೈಲ್ ತೆಗೆದು ಚಿತ್ರೀಕರಿಸುತ್ತಿರುವ ದೃಶ್ಯ ಕಂಡುಬಂದಿತು. ಸಿಡಿಬಂಡಿ ಮೂರು ಸುತ್ತು ಪ್ರದಕ್ಷಿಣೆ ಹಾಕುವ ವೇಳೆ ಭಕ್ತರು ಹೂವು, ಬಾಳೆಹಣ್ಣು, ಕಬ್ಬು ಹಾಗೂ ಜೀವಂತ ಕೋಳಿಗಳನ್ನು ಎಸೆದು ಹರಕೆ ತೀರಿಸಿದರು.

ಸಿಡಿಬಂಡಿ ರಥೋತ್ಸವ ಹಿನ್ನೆಲೆಯಲ್ಲಿ ಕನಕ ದುರ್ಗಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಈ ವರ್ಷವೂ ಬಂಗಾರ ಆಭರಣಗಳಿಂದ ಅಲಂಕಾರ ಮಾಡಲಾಗಿದ್ದು, ಮಂಗಳವಾರ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಸಂಸದ ದೇವೆಂದ್ರಪ್ಪ, ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಕೂಡ ಸಿಡಿಬಂಡಿ ರಥೋತ್ಸವದಲ್ಲಿ ಭಾಗವಹಿಸಿ ದೇವಿಗೆ ಕೃಪೆಗೆ ಪಾತ್ರರಾದರು. ಇನ್ನು, ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರಿಂದ ಪೊಲೀಸರು ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಇದನ್ನೂ ಓದಿ :ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲೇ ಸ್ಪರ್ಧೆ ಮಾಡುವೆ: ಸಚಿವ ಶ್ರೀರಾಮುಲು

Last Updated : Mar 1, 2023, 12:45 PM IST

ABOUT THE AUTHOR

...view details