ಬಳ್ಳಾರಿ :ಕನ್ಯಾಕುಮಾರಿಯಿಂದ ಆರಂಭಗೊಂಡಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇವತ್ತು ಗಣಿನಾಡಿನಲ್ಲಿ ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಯಿತು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಹಿಂದೆ ನಡೆದ ಸಿದ್ದರಾಮಯ್ಯ ನೇತೃತ್ವದ ಬಳ್ಳಾರಿ ಪಾದಯಾತ್ರೆಯನ್ನು ನೆನಪಿಸುವಂತಿತ್ತು. ಗಣಿನಾಡಿನಲ್ಲಿ ನಡೆದ ಈ ಬೃಹತ್ ಸಮಾವೇಶ ರಣಕಹಳೆಯನ್ನೇ ಮೊಳಗಿಸಿದೆ.
ಬಳ್ಳಾರಿಯಲ್ಲಿ ಭಾರತ್ ಜೋಡೋ ಸಮಾವೇಶ: ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಇಂದಿಗೆ 15 ನೇ ದಿನಕ್ಕೆ ಕಾಲಿಟ್ಟಿದೆ. ಒಟ್ಟು 3500 ಕಿ.ಮೀಗಳ ಪಾದಯಾತ್ರೆ ಪೈಕಿ ಇಂದಿಗೆ 1 ಸಾವಿರ ಕಿ.ಮೀ ಪಾದಯಾತ್ರೆ ಮುಗಿದಿದ್ದು, ಇನ್ನೂ 2500 ಕಿಮೀ ಪಾದಯಾತ್ರೆ ಮಾಡಬೇಕಿದೆ. ಶುಕ್ರವಾರ ಸಂಜೆಯೇ ಬಳ್ಳಾರಿ ಪ್ರವೇಶಿಸಿದ್ದ ಪಾದಯಾತ್ರೆ ಬಳ್ಳಾರಿ ತಾಲೂಕಿನ ಹಲಕುಂದಿ ಮಠದ ಬಳಿ ರಾಹುಲ್ ಗಾಂಧಿ ವಾಸ್ತವ್ಯ ಹೂಡಿದ್ದರು. ಇವತ್ತು ಬೆಳಗ್ಗೆ 6 ಗಂಟೆಗೆ ಆರಂಭವಾದ ಪಾದಯಾತ್ರೆ ಬೆಳಗ್ಗೆ 9 ಗಂಟೆಗೆ ಬಳ್ಳಾರಿ ನಗರದ ಕಮ್ಮ ಭವನ ತಲುಪಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ ಅನೇಕ ನಾಯಕರು ರಾಹುಲ್ ಜೊತೆ ಹೆಜ್ಜೆ ಹಾಕಿದರು.
ಇನ್ನು, ಮಧ್ಯಾಹ್ನ 1:30 ಕ್ಕೆ ನಗರದ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ಜೋಡೋ ಯಾತ್ರೆಯ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಲಕ್ಷಾಂತರ ಕಾರ್ಯಕರ್ತರು ಕಿಕ್ಕಿರಿದು ಸೇರಿದ್ದರು. ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ವೇದಿಕೆಗೆ ಆಗಮಿಸುತ್ತಿದ್ದಂತಿಯೇ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಡಿತ್ತು. ಬೃಹತ್ ಸಮಾವೇಶಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿದರು.
ಆರ್ಎಸ್ಎಸ್ ಮತ್ತು ಮೋದಿ ವಿರುದ್ಧ ವಾಗ್ದಾಳಿ: ಬಳಿಕ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಬಿಜೆಪಿ, ಆರ್ ಎಸ್ ಎಸ್ ಹಾಗೂ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿ ಧರ್ಮ, ಜಾತಿ ವಿಷಯದಲ್ಲಿ ವಿಷಬೀಜ ಬಿತ್ತಲಾಗುತ್ತಿದೆ. ದ್ವೇಷದ ರಾಜಕಾರಣದಿಂದ ಜನರು ಆತಂಕದಲ್ಲಿದ್ದಾರೆ. ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆಯಲ್ಲಿ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದ್ದೇನೆ ಎಂದರು.