ಬೆಳಗಾವಿ:ಜಿಲ್ಲೆಯ ಬೆಳಗಾವಿ ಮತ್ತು ಖಾನಾಪುರ ಹೊರತುಪಡಿಸಿ, 13 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ಬರಪಿಡೀತ ತಾಲೂಕುಗಳ ಪಟ್ಟಿಯಿಂದ ವಂಚಿತವಾಗಿರುವ ಉಭಯ ತಾಲ್ಲೂಕುಗಳ ರೈತರು ಸರ್ಕಾರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ರಾಮದುರ್ಗ, ರಾಯಬಾಗ, ಸವದತ್ತಿ, ಚನ್ನಮ್ಮನ ಕಿತ್ತೂರು, ನಿಪ್ಪಾಣಿ, ಕಾಗವಾಡ, ಮೂಡಲಗಿ, ಯರಗಟ್ಟಿ ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಆದರೆ, ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳನ್ನು ಈ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷ ಅತಿವೃಷ್ಟಿಯಿಂದ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದರು. ಆದರೆ, ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ರೈತರ ಬದುಕು ಅತಂತ್ರವಾಗಿದೆ. ಸಾಲ ಮಾಡಿ ಬಿತ್ತಿದ್ದ ಹೆಸರು, ಉದ್ದು, ಸೋಯಾಬೀನ್, ಕಬ್ಬು, ಶೇಂಗಾ, ಭತ್ತ ಸೇರಿ ಇನ್ನಿತರ ಬೆಳೆ ಬೆಳೆದಿದ್ದ ರೈತರು ಬೆಳೆ ಹಾನಿ ಭೀತಿ ಅನುಭವಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಜೂನ್ 1ರಿಂದ ಇಲ್ಲಿಯವರೆಗೆ 514 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 456 ಮಿ.ಮೀ ಮಳೆಯಾಗಿದೆ. ಶೇ. 11ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 7.11 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, 6.39 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.10 ರಷ್ಟು ಬಿತ್ತನೆಯಾಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.