ಕರ್ನಾಟಕ

karnataka

ETV Bharat / state

ವಿಮ್ಸ್​ ನ್ಯೂ ಡೆಂಟಲ್ ಕಾಲೇಜಿಗೆ ನುಗ್ಗಿ ಮಾಯವಾಗಿದ್ದ ಕರಡಿ ಜಾಲಿ ಪೊದೆಯಲ್ಲಿ ಪ್ರತ್ಯಕ್ಷ!

ಕರಡಿಯೊಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ನ್ಯೂ ಡೆಂಟಲ್ ಕಾಲೇಜಿಗೆ ನುಗ್ಗಿ ಅಲ್ಲಿನ ಹೋಂ ಗಾರ್ಡ್​ನನ್ನು ಅಟ್ಟಿಸಿಕೊಂಡು ಹೋದ ಘಟನೆ ನಡೆದಿದೆ. ಇದೀಗ ಕರಡಿಯು ತಾಳೂರು ರಸ್ತೆಯ 16ನೇ ಕ್ರಾಸ್​ನಲ್ಲಿರುವ ಜಾಲಿ ಪೊದೆಯಲ್ಲಿ ಅವಿತುಕೊಂಡಿದ್ದು, ಅರಣ್ಯ ಇಲಾಖೆ ಸೆರೆ ಹಿಡಿಯಲು ಹರಸಾಹಸ ಪಡುತ್ತಿದೆ.

Vims
ವಿಮ್ಸ್​

By

Published : Jun 12, 2021, 10:55 AM IST

Updated : Jun 12, 2021, 2:31 PM IST

ಬಳ್ಳಾರಿ:ವಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ನ್ಯೂ ಡೆಂಟಲ್ ಕಾಲೇಜಿಗೆ ನುಗ್ಗಿದ ಕರಡಿಯೊಂದು ಹೋಂ ಗಾರ್ಡ್ ಮೇಲೆ ದಾಳಿಗೆ ಯತ್ನಿಸಿ ಕೆಲಕಾಲ ಅವಾಂತರ ಸೃಷ್ಟಿಸಿದೆ. ಇದು ನಂಬೋಕೆ ಆಗದಿದ್ದರೂ ನಿಜ ಅಂತಾರೆ ಅಲ್ಲಿ ಕರಡಿ ಕಂಡ ಪ್ರತ್ಯಕ್ಷದರ್ಶಿಗಳು. ಆದ್ರೆ ತಪ್ಪಿಸಿಕೊಂಡಿದ್ದ ಕರಡಿ ಇದೀಗ ಪೊದೆಯೊಂದರಲ್ಲಿ ಪ್ರತ್ಯಕ್ಷವಾಗಿದೆ.

ಮಾಯವಾಗಿದ್ದ ಕರಡಿ ಜಾಲಿ ಪೊದೆಯಲ್ಲಿ ಪ್ರತ್ಯಕ್ಷ

ಹಳೆಯ ಡೆಂಟಲ್ ಕಾಲೇಜನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದರಿಂದ ಅದರ ಅನತಿ ದೂರದಲ್ಲಿರುವ ಈ ನ್ಯೂ ಡೆಂಟಲ್ ಕಾಲೇಜಿನ ಕಾವಲಿಗಾಗಿ ಹೋಂ ಗಾರ್ಡ್​ ಒಬ್ಬರು ಕಳೆದ ರಾತ್ರಿ ಕರ್ತವ್ಯಕ್ಕೆ ಹಾಜರಾಗಿದ್ದರು. ರಾತ್ರಿ 10 ಗಂಟೆಯ ಸುಮಾರಿಗೆ ಎಲ್ಲಿಂದಲೋ ಬಂದ ಕರಡಿಯೊಂದು ಏಕಾಏಕಿ ಹೋಮ್ ಗಾರ್ಡ್​ ಮೇಲೆ ದಾಳಿಗೆ ಯತ್ನಿಸಿದೆ. ಅದರಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ ಆತನನ್ನು ಅಟ್ಟಿಸಿಕೊಂಡು ಹೋಗಿದೆ.

ಓಡಿದ ಹೋಂ ಗಾರ್ಡ್ ಅಲ್ಲಿನ ಹೋಮ್ ಗಾರ್ಡ್ಸ್​ಗಳ ವಿಶ್ರಾಂತಿ ಕೊಠಡಿಯೊಳಗೆ ಹೋಗಿದ್ದಾರೆ. ಪರಿಣಾಮ ಕರಡಿ ದಾಳಿಯಿಂದ ಅವರು ಸೇಫ್ ಆಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆ ಬಳಿಕ ಪಕ್ಕದ ಚಿಕಿತ್ಸಾ ವಿಭಾಗಕ್ಕೆ ನುಗ್ಗಲು ಆ ಕರಡಿ ಪ್ರಯತ್ನಿಸಿದೆ ಎನ್ನಲಾಗಿದೆ.

ಆದ್ರೆ ಇದೀಗ ಬಳ್ಳಾರಿಯ ತಾಳೂರು ರಸ್ತೆಯ 16ನೇ ಕ್ರಾಸ್​ನಲ್ಲಿರುವ ಜಾಲಿ ಪೊದೆಯಲ್ಲಿ ಕರಡಿ ಅವಿತುಕೊಂಡಿದ್ದು, ಸರಿಸುಮಾರು ಎರಡು ಗಂಟೆಗಳ ಕಾಲ ಕರಡಿ ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ.

ಖಾಲಿ ನಿವೇಶನದಲ್ಲಿರುವ ಜಾಲಿ ಪೊದೆಯಲ್ಲಿ ಕರಡಿ ಅವಿತುಕೊಂಡಿದೆ. ಉರಗ ತಜ್ಞ ಪ್ರಿಯ ಕಮಲಾಪುರ ವೇಣು ಅವರ ನೇತೃತ್ವದಲ್ಲಿ ಈ ಕರಡಿ ಹಿಡಿಯಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 10.30 ಗಂಟೆ ಸುಮಾರಿಗೆ ಈ ಕರಡಿ ಹಿಡಿಯಲು ಶತಾಯಗತಾಯ ಪ್ರಯತ್ನ ನಡೆಸಿದ್ರೂ ಕೂಡ ಕರಡಿ ಮಾತ್ರ ಪೊದೆಯೊಳಗೆ ಅವಿತುಕೊಂಡಿದೆ.


ಈ ಕುರಿತು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿರುವ ಕೌಲ್ ಬಜಾರ್​ನ ಸಿಪಿಐ ಸುಭಾಷ್, ತಡರಾತ್ರಿ ಕರಡಿ ಪ್ರತ್ಯಕ್ಷವಾಗಿದೆ ಅಂತ ಮಾಹಿತಿ ಬಂತು. ಘಟನಾ ಸ್ಥಳಕ್ಕೆ ಹೋದಾಗ ಅಲ್ಲಿ ಕರಡಿ ಇರಲಿಲ್ಲ. ಅಲ್ಲಿ ಕರಡಿಯೊಂದು ಪ್ರತ್ಯಕ್ಷ ಆಗಿರೋದನ್ನ ಅಲ್ಲಿದ್ದವರು ನೋಡಿದ್ದಾರೆ ಅಂತ ತಿಳಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಕರಡಿ ಹುಡುಕಾಟ ನಡೆಸಿದ್ದಾರೆ. ಆದರೂ ಸಿಕ್ಕಿಲ್ಲ. ವಾಸ್ತವವಾಗಿ ಅಲ್ಲಿ ಕರಡಿ ಹೇಗೆ ಪ್ರತ್ಯಕ್ಷವಾಯಿತೆಂದು ನನಗಂತೂ ತೋಚದಂತಾಗಿದೆ. ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದನ್ನೇ ನಾನು ನಂಬಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣವೇ ಕೌಲ್ ಬಜಾರ್ ಠಾಣೆಯ ಸಿಪಿಐ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಡೆಂಟಲ್ ಕಾಲೇಜಿನ ವೈದ್ಯರು ಘಟನಾ ಸ್ಥಳಕ್ಕಾಗಮಿಸಿದ್ದಾರೆ. ಕರಡಿಗಾಗಿ ಹುಡುಕಾಟ ನಡೆಸಿದ್ರೂ ಕರಡಿ ಮಾತ್ರ ಸಿಗಲಿಲ್ಲವಂತೆ.

ಘಟನಾ ಸ್ಥಳದಲ್ಲಿ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಎಸ್​​ಪಿ ಲಾವಣ್ಯ ಸೇರಿದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.

ಇದನ್ನೂ ಓದಿ:ಗಂಟುಮೂಟೆ ಸಮೇತ ರಾಜಧಾನಿಗೆ ಜನರು ವಾಪಸ್​​​: ಅನ್​​ಲಾಕ್ ಆಯ್ತಾ ಬೆಂಗಳೂರು!?

Last Updated : Jun 12, 2021, 2:31 PM IST

ABOUT THE AUTHOR

...view details