ಕರ್ನಾಟಕ

karnataka

ETV Bharat / state

ದಾಳಿಂಬೆ ಬೆಳೆಗೆ ಕರಡಿ ಕಾಟ: ಕಂಗಾಲಾದ ರೈತ

ಕೊರೊನಾ ಪರಿಣಾಮ ದಾಳಿಂಬೆಗೆ ಬೆಲೆಯೂ ಕಡಿಮೆಯಾಗಿದ್ದು, ದುಬಾರಿ ಬೀಜ-ರಸಗೊಬ್ಬರ, ಕ್ರಿಮಿನಾಶಕ ಔಷಧಿ, ಕೂಲಿಗಳ ಸಂಬಳ ಕಳೆದು ಬೆಳೆಗಾರರಿಗೆ ಏನೂ ಸಿಗುವುದಿಲ್ಲ. ಈ ಮಧ್ಯೆ ಬೆಳೆದು ನಿಂತ ಫಸಲಿಗೆ ಕರಡಿ ದಾಂಗುಡಿ ಇಟ್ಟು ಹಾಳು ಮಾಡುತ್ತಿರುವುದು ರೈತನ ಕಂಗೆಡಿಸಿದೆ.

Bear attack on pomegranate crop
ದಾಳಿಂಬೆ ಬೆಳೆಗೆ ಕರಡಿ ಕಾಟ

By

Published : Jul 15, 2020, 3:45 PM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಎಂ.ಬಿ‌.ಅಯ್ಯನಹಳ್ಳಿ ಗ್ರಾಮದ ಹೊರವಲಯದಲ್ಲಿ ಅಂದಾಜು 6 ಎಕರೆ ಜಮೀನಿನಲ್ಲಿ ಬೆಳೆದ ದಾಳಿಂಬೆ ಬೆಳೆಗೆ ಕರಡಿ ಕಾಟ ಶುರುವಾಗಿದ್ದು, ರೈತ ಕಂಗಾಲಾಗಿದ್ದಾನೆ.

ಎಂ.ಬಿ.ಅಯ್ಯನಹಳ್ಳಿ ಗ್ರಾಮದ ರೈತ ಕೆ.ವೀರಭದ್ರಪ್ಪ ಎಂಬವರು ತನ್ನ 6 ಎಕರೆ ಜಮೀನಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ದಾಳಿಂಬೆ ಬೆಳೆ ಬೆಳೆದಿದ್ದು, ಅದು ಈಗ ಫಸಲಿಗೆ ಬಂದಿದೆ. ಬೆಳೆಗೆ ಯಾವುದೇ ಸೋಂಕು‌ ತಗುಲದೆ ಚೆನ್ನಾಗಿ ಬೆಳೆದಿರುವುದು ರೈತನ ಸಂತಸಕ್ಕೆ ಕಾರಣವಾಗಿತ್ತು. ಆದರೆ ಇತ್ತೀಚೆಗೆ ಪ್ರತಿ ದಿನ ರಾತ್ರಿ ದಾಳಿಂಬೆ ತೋಟಕ್ಕೆ ಕರಡಿ ಲಗ್ಗೆಯಿಟ್ಟು ಹಣ್ಣುಗಳನ್ನು ಹಾಳು ಮಾಡುತ್ತಿದೆ. ಕರಡಿ ತಿನ್ನೋದು ಕಡಿಮೆಯಾದ್ರೂ ಹಣ್ಣುಗಳನ್ನ ಕಿತ್ತು ಸ್ವಲ್ಪ ತಿಂದು ನೆಲಕ್ಕೆ ಹಾಕಿ ಹೋಗುತ್ತದೆ. ಪ್ರತಿದಿನ ಬೆಳಿಗ್ಗೆ ಹೋಗಿ ನೋಡಿದರೆ ರಾಶಿ ರಾಶಿ ಹಣ್ಣುಗಳು ಮಣ್ಣು ಪಾಲಾಗಿರುತ್ತವೆ.

ಕೊರೊನಾ ಪರಿಣಾಮ ದಾಳಿಂಬೆಗೆ ಬೆಲೆಯೂ ಕಡಿಮೆಯಾಗಿದ್ದು, ದುಬಾರಿ ಬೀಜ-ರಸಗೊಬ್ಬರ, ಕ್ರಿಮಿನಾಶಕ ಔಷಧಿ, ಕೂಲಿಗಳ ಸಂಬಳ ಕಳೆದು ಬೆಳೆಗಾರರಿಗೆ ಏನೂ ಸಿಗುವುದಿಲ್ಲ. ಈ ಮಧ್ಯೆ ಬೆಳೆದು ನಿಂತ ಫಸಲಿಗೆ ಕರಡಿ ದಾಂಗುಡಿ ಇಟ್ಟು ಹಾಳು ಮಾಡುತ್ತಿರುವುದು ರೈತನ ಕಂಗೆಡಿಸಿದೆ.

ರಾತ್ರಿ ವೇಳೆ‌ ದಾಳಿಂಬೆ‌ ಬೆಳೆ ಕಾಯಲು ಬಂದರೂ ಕರಡಿ ದಾಂಧಲೆ ಜಾಸ್ತಿಯಾಗುತ್ತಿರೋದನ್ನು ಮನಗಂಡು ರೈತ ವೀರಭದ್ರಪ್ಪ ಟಾಟಾ ಏಸ್​ ವಾಹನದಲ್ಲಿ‌ ನಾಯಿಗಳನ್ನು‌‌ ತಂದು‌ ಕಾವಲು‌ ಕಾಯಲು ಶುರು ಮಾಡಿದ್ದಾರೆ.‌ ರಾತ್ರಿಯಾದರೆ ಸಾಕು ಐದಾರು ಕರಡಿಗಳು ದಾಳಿಂಬೆ ತೋಟಕ್ಕೆ ಲಗ್ಗೆಯಿಡುತ್ತವೆ. ಒಂದು ಮೂಲೆಯಲ್ಲಿ ನಾಯಿ ಬೊಗಳಿದರೆ ಮತ್ತೊಂದು ಮೂಲೆಗೆ ಹೋಗಿ ಹಣ್ಣುಗಳನ್ನು ತಿನ್ನುತ್ತವೆ. ರಾತ್ರಿ ಕಾದರೂ ಸಹ ಕರಡಿಗಳು ಹೆದರದೆ ಹಣ್ಣುಗಳನ್ನು ನಾಶ ಮಾಡುತ್ತಿರುವುದರಿಂದ ರೈತನಿಗೆ ದಿಕ್ಕು ತೋಚದಂತಾಗಿದೆ. ಗುಡೇಕೋಟೆ ಹೋಬಳಿಯಲ್ಲಿ ದಾಳಿಂಬೆ ಸೇರಿದಂತೆ ಇನ್ನಿತರೆ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರ ಪಾಡು ಇದೇ ಆಗಿದೆ.

ಈಗಾಗಲೇ 400 ಬಾಕ್ಸ್ ಹಣ್ಣುಗಳನ್ನು ಕೊಯಮತ್ತೂರಿಗೆ ಕಳಿಸಲಾಗಿದ್ದು, ಬೆಲೆಯೂ ಅಷ್ಟಕ್ಕಷ್ಟೇ ಇದೆ. 65 ಸಾವಿರ ರೂ. ಮೌಲ್ಯದ 100 ಬಾಕ್ಸ್​​ ದಾಳಿಂಬೆ ಹಣ್ಣುಗಳನ್ನು ಕರಡಿಗಳು ಹಾಳು ಮಾಡಿವೆ. ಹೀಗಾಗಿ ಏನು ಮಾಡ್ಬೇಕು ಎನ್ನುವುದು ತಿಳಿಯುತ್ತಿಲ್ಲ ಎನ್ನುತ್ತಾರೆ ದಾಳಿಂಬೆ ಬೆಳೆಗಾರ ಕೆ.ವೀರಭದ್ರಪ್ಪ.

ನಮ್ಮಲ್ಲಿ ದಾಳಿಂಬೆ ಬೆಳೆಗೆ ಪರಿಹಾರ ಇಲ್ಲ. ರೈತ ಈ ಬಗ್ಗೆ ಇಲಾಖೆಗೆ ನಷ್ಟದ ಕುರಿತು ಮನವಿ ಸಲ್ಲಿಸಿದ್ರೆ ನಮ್ಮ ಡಿಎಫ್‍ಒ ಸಾಹೇಬ್ರಿಗೆ ಕಳುಹಿಸಿಕೊಡ್ತೀವಿ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ಕೈಗೊಳ್ತೀವಿ. ಈ ದಿನವೇ ಇಲಾಖೆ ಸಿಬ್ಬಂದಿಯಿಂದ ತೋಟದ ಆಸುಪಾಸಿನಲ್ಲಿ ಬಂದು ಪಟಾಕಿ ಸಿಡಿಸಿ ಕರಡಿ ಓಡಿಸುವ ಪ್ರಯತ್ನ ಮಾಡ್ತೀವಿ. ರೈತರು ನೆಮ್ಮದಿಯ ಜೀವನ ಮಾಡಬೇಕು.‌ ಕರಡಿಗಳ ಸಂತತಿಯೂ ಬೆಳೆಯಬೇಕು ಎನ್ನುತ್ತಾರೆ ಕೂಡ್ಲಿಗಿ ತಾಲೂಕು ಗುಡೇಕೋಟೆ ವಲಯ ಅರಣ್ಯಾಧಿಕಾರಿ ಮಂಜುನಾಥ.

ABOUT THE AUTHOR

...view details