ಬಳ್ಳಾರಿ: ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ಆಸ್ಪತ್ರೆಗೆ ನಿತ್ಯ ಬರುವ ಸಾವಿರಾರು ರೋಗಿಗಳಿಗೆ ಅನುಕೂಲವಾಗಲೆಂದು ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ವಿಮ್ಸ್ ಆಡಳಿತ ಮಂಡಳಿ ಕೋರಿಕೆಯಂತೆ ಸರ್ಕಾರ ನಾಲ್ಕು ಬ್ಯಾಟರಿ ಚಾಲಿತ ವಾಹನಗಳನ್ನು ಬಳ್ಳಾರಿಗೆ ನೀಡಿದ್ದು, ವಿಮ್ಸ್ ಆಸ್ಪತ್ರೆಗೆ ಎರಡು ಹಾಗೂ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಎರಡು ವಾಹನಗಳನ್ನು ಸೇವೆಗೆ ಬಿಡಲಾಗಿದೆ.
ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪೈಕಿ ಬಳ್ಳಾರಿಯಲ್ಲಿ ಮಾತ್ರ ಬ್ಯಾಟರಿ ಚಾಲಿತ ವಾಹನ ಸೇವೆಗೆ ವೈದ್ಯಕೀಯ ಇಲಾಖೆ ಕ್ರಮ ವಹಿಸಿದೆ. ಡೆಂಟಲ್ ಆಸ್ಪತ್ರೆ ಸೇರಿದಂತೆ ವಿಮ್ಸ್ ವಿವಿಧ ವಿಭಾಗಗಳಿಗೆ ತೆರಳುವ ರೋಗಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ವೃದ್ಧರು, ತೀವ್ರ ಅಸ್ವಸ್ಥ ರೋಗಿಗಳನ್ನು ಆಸ್ಪತ್ರೆಯ ನಿರ್ದಿಷ್ಟ ವಿಭಾಗಕ್ಕೆ ದಾಖಲು ಮಾಡುವುದು ಕುಟುಂಬಸ್ಥರಿಗೆ ಕಷ್ಟಸಾಧ್ಯ ಎನಿಸಿತ್ತು. ವಿಮ್ಸ್ ಆಸ್ಪತ್ರೆಯಲ್ಲಿ ಹತ್ತಾರು ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಬಸ್ ನಿಲ್ದಾಣದಿಂದ ವಾರ್ಡ್‌ಗೆ ರೋಗಿಗಳನ್ನು ಎತ್ತಿಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಾಲ್ಕು ವಾಹನ: ಇದನ್ನರಿತ ವಿಮ್ಸ್ ಆಡಳಿತ ಮಂಡಳಿ ಬ್ಯಾಟರಿ ಚಾಲಿತ ವಾಹನಗಳನ್ನು ನೀಡುವಂತೆ ವೈದ್ಯಕೀಯ ಇಲಾಖೆಗೆ ಮನವಿ ಮಾಡಿಕೊಂಡಿತ್ತು. ಈಗ ವಿಮ್ಸ್ ಆಸ್ಪತ್ರೆಗೆಂದು ನಾಲ್ಕು ಬ್ಯಾಟರಿ ಚಾಲಿತ ವಾಹನಗಳನ್ನು ವೈದ್ಯಕೀಯ ಇಲಾಖೆ ನೀಡಿದೆ. ಇದರ ಬಳಕೆಯ ಪ್ರಮಾಣ ನೋಡಿಕೊಂಡು ಮತ್ತಷ್ಟು ವಾಹನಗಳನ್ನು ತರಿಸಿಕೊಳ್ಳಲು ವಿಮ್ಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.