ಹೊಸಪೇಟೆ :ವಿಶ್ವವಿಖ್ಯಾತ ಹಂಪಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದುಕೊಂಡಿದೆ. ಸ್ಮಾರಕಗಳನ್ನು ವೀಕ್ಷಣೆ ಮಾಡಲು ದೇಶ-ವಿದೇಶಳಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಆದರೆ, ಪ್ರವಾಸಿಗರಿಗೆ ಮೂಲ ಸೌಕರ್ಯಗಳು ಹಂಪಿಯಲ್ಲಿ ಕಾಣಸಿಗಲ್ಲ. ಇದರಿಂದ ಪ್ರವಾಸಿಗರು ಹಾಗೂ ವಿರೂಪಾಕ್ಷೇಶ್ವರ ಭಕ್ತರು ಸಮಸ್ಯೆ ಅನುಭವಿಸುವಂತಾಗಿದೆ.
ವಿಶ್ವವಿಖ್ಯಾತ ಹಂಪಿಯಲ್ಲಿ ಮೂಲ ಸೌಕರ್ಯಗಳು ಮರೀಚಿಕೆ, ಪ್ರವಾಸಿಗರು, ಭಕ್ತರ ಪರದಾಟ ಹಂಪಿಯ ವಿರೂಪಾಕ್ಷೇಶ್ವರ, ರಾಣಿ ಸ್ನಾನಗೃಹ, ಉಗ್ರ ನರಸಿಂಹ, ಸಾಸಿವೆ ಕಾಳು ಹಾಗೂ ಕಡಲೆಕಾಳು ಗಣೇಶ, ಕೃಷ್ಣ ಬಜಾರ್ ಸೇರಿ ನಾನಾ ಸ್ಮಾರಕಗಳ ಬಳಿ ಮೂಲಸೌಕರ್ಯ ಮರೀಚಿಕೆ ಆಗಿದೆ. ಹಂಪಿ ವೀಕ್ಷಣೆಗೆ ಬರುವ ಪ್ರವಾಸಿಗರು ಮೂಲಸೌಕರ್ಯಗಳ ಸಮಸ್ಯೆ ಎದುರಿಸುವಂತಾಗಿದೆ.
ಶೌಚಾಲಯ ನಿರ್ವಹಣೆ ನಿರ್ಲಕ್ಷ್ಯ:ಪ್ರವಾಸೋದ್ಯಮ ಇಲಾಖೆಯಿಂದ ರಾಣಿ ಸ್ನಾನಗೃಹ ಹಾಗೂ ಗಾಯಿತ್ರಿ ಪೀಠದ ಬಳಿ ಶೌಚಾಲಯದ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ, ಇವುಗಳ ನಿರ್ವಹಣೆ ಇಲ್ಲದೇ ಪಾಳು ಬಿದ್ದಿವೆ. ಸಾಸಿವೆ ಕಾಳು ಹಾಗೂ ಕಡಲೆ ಕಾಳು ಮೂರ್ತಿ ಬಳಿ ತಾತ್ಕಾಲಿಕವಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳು ಸಹ ನಿರ್ವಹಣೆ ಇಲ್ಲದೇ ಬಳಕೆ ಆಗುತ್ತಿಲ್ಲ. ಪ್ರವಾಸಿಗರು ಶೌಚಾಲಯಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕುಡಿಯುವ ನೀರಿನ ಸಮಸ್ಯೆ :ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಭಾರತೀಯ ಸರ್ವೇಕ್ಷಣಾ ಇಲಾಖೆಯಿಂದ ಶುದ್ಧ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲದೇ ಅದು ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೇ, ಶುದ್ಧನೀರಿನ ಘಟಕದ ಬಳಿ ಟ್ಯಾಂಕ್ ನಿರ್ಮಿಸಿ ಕುಡಿಯುವ ನೀರಿಗಾಗಿ ನಳಗಳನ್ನು ಮಾಡಲಾಗಿದೆ. ಆದರೆ, ಅಲ್ಲಿ ಹಸಿರು ಬಣ್ಣದ ಪಾಚಿಕಟ್ಟಿದ್ದು, ಪ್ರಾವಾಸಿಗರು ಹಾಗೂ ಭಕ್ತರು ಆ ಕಡೆ ಸುಳಿಯುತ್ತಿಲ್ಲ.
ವಸತಿ ಸೌಕರ್ಯವಿಲ್ಲ :ಹಂಪಿ ಸ್ಥಳೀಯವಾಗಿ ವಸತಿ ಸೌಲಭ್ಯ ಪ್ರವಾಸಿಗರಿಗೆ ಸಿಗುತ್ತಿಲ್ಲ. ಸುತ್ತಮುತ್ತಲಿನಲ್ಲಿ ವಸತಿ ಸೌಲಭ್ಯವಿದ್ದು, ಹೆಚ್ಚು ಹಣವನ್ನು ಪಾವತಿಸುವ ಸ್ಥಿತಿ ಇದೆ. ಹಂಪಿಯಲ್ಲಿ ಸರ್ಕಾರದಿಂದ ಸೂಕ್ತ ದರದಲ್ಲಿ ವಸತಿ ಸೌಲಭ್ಯವನ್ನು ಒದಗಿಸಿದರೆ ಪ್ರವಾಸಿಗರಿಗೆ ಅನುಕೂಲ ಹಾಗೂ ಪ್ರವಾಸೋದ್ಯಮ ಬೆಳೆವಣಿಗೆಗೆ ಉತ್ತೇಜನ ನೀಡಿದಂತಾಗುತ್ತದೆ.
ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ಸಿಗಲಿ :ಹಂಪಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ಆದರೆ, ಪ್ರವಾಸಿಗರಿಗೆ ಸೌಕರ್ಯಗಳನ್ನು ನೀಡುವಲ್ಲಿ ಹಿಂದೆ ಬಿದ್ದಿದೆ. ವರ್ಷಕ್ಕೆ ಲಕ್ಷಾಂತರ ಪ್ರವಾಸಿಗರು ದೇಶ-ವಿದೇಶಗಳಿಂದ ಹಂಪಿ ವೀಕ್ಷಣೆಗೆ ಬರುತ್ತಾರೆ. ಅಲ್ಲದೇ, ಅವರಿಂದ ಸಾಕಷ್ಟು ಪ್ರಮಾಣದಲ್ಲಿ ಪುರಾತತ್ವ ಇಲಾಖೆಗೆ ಆದಾಯ ಹರಿದು ಬರುತ್ತದೆ. ಆದರೆ, ಪ್ರವಾಸಿಗರಿಗೆ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಹಾಗೂ ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ಮೂಲ ಸೌಕರ್ಯ ಸಿಗದೇ ಇರುವುದು ಬೇಜವ್ದಾರಿತನಕ್ಕೆ ಸಾಕ್ಷಿಯಾಗಿದೆ.
ಕಿಡಿಗೇಡಿಗಳ ಕಾಟ :ಈ ಹಿಂದೆ ಹಂಪಿಯಲ್ಲಿ ಸ್ಮಾರಕ ಕಂಬಗಳನ್ನು ಕಿಡಿಗೇಡಿಗಳು ಬೀಳಿಸಿರುವ ಉದಾಹರಣೆಗಳು ಕಾಣಸಿಗುತ್ತದೆ. ಸ್ಮಾರಕ ಮುಂದಿನ ಪೀಳಿಗೆಗೆ ನೋಡಲು ಅವಕಾಶ ಕಲ್ಪಿಸುವುದು ಪುರಾತತ್ವ ಹಾಗೂ ಹಂಪಿ ಪ್ರಾಧಿಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹಂಪಿಯ ಸ್ಮಾರಕಗಳಿಗೆ ಸಿಸಿ ಕ್ಯಾಮೆರಾಗಳ ಕಣ್ಗಾವಲು ಹಾಕಬೇಕು. ಅಲ್ಲದೇ, ಭದ್ರತೆ ಹೆಚ್ಚಿಸಬೇಕಾಗಿದೆ.
ಮಹಿಳೆಯರ ಗೋಳು ಹೇಳತೀರದು :ವಿರೂಪಾಕ್ಷೇಶ್ವರ ದೇವಸ್ಥಾನದ ಸಮೀಪದಲ್ಲಿ ಶೌಚಾಲಯಗಳು ಕಾಣಸಿಗುವುದಿಲ್ಲ. ಶೌಚಾಲಯಕ್ಕೆ ಹೋಗಬೇಕಾದರೆ ಸ್ನಾನಗಟ್ಟದ ಬಳಿ ಹಾಗೂ ಸ್ವಲ್ಪ ದೂರ ತೆರಳಬೇಕಾಗುತ್ತದೆ. ಹೊಸ ಪ್ರವಾಸಿಗರು ಹುಡುಕುವಂತ ಪರಿಸ್ಥಿತಿ ಇದೆ. ಈ ಮುಂಚೆ ವಿರೂಪಾಕ್ಷೇಶ್ವರ ಬಿಷ್ಟಪ್ಪಯ್ಯ ಗೋಪುರದ ಬಲ ಭಾಗದಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿತ್ತು.
ಆದರೆ, ಅವುಗಳನ್ನು ತೆರವುಗೊಳಿಸಲಾಗಿದೆ. ಸ್ನಾನಗಟ್ಟದ ಬಳಿ ಮಹಿಳೆಯರು ಬಟ್ಟೆ ಬದಲಾಯಿಸಲು ನದಿ ಬಳಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿಲ್ಲ. ಮೇಲ್ಭಾಗದಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ಮಹಿಳೆಯರು ತೆರಳುತ್ತಿಲ್ಲ. ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯ ಉಪ ಅಧೀಕ್ಷಕ ಕಾಳಿಮುತ್ತು ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿನ ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸದಿರುವುದು ಗಮನಕ್ಕೆ ಬಂದಿಲ್ಲ. ಕೂಡಲೇ ದುರಸ್ಥಿ ಕಾರ್ಯ ಕೈಗೊಂಡು, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಆಯುಕ್ತ ಪಿ ಎನ್ ಲೋಕೇಶ್ ಅವರು ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.