ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾದ್ಯಂತ ಬಿರುಬಿಸಿಲಿನ ತಾಪಮಾನ ತಗ್ಗಿದರೂ ಕೂಡ ಒಣಹವೆ ಮಾತ್ರ ಯಥಾಸ್ಥಿತಿಯಲ್ಲಿ ಇರಲಿದೆ. ಹಾಗಾಗಿ ಉಭಯ ಜಿಲ್ಲೆಗಳ ಜನರು ಮುಂಜಾಗ್ರತೆ ವಹಿಸಿಕೊಳ್ಳೋದು ಸದ್ಯದ ಸ್ಥಿತಿಯಲ್ಲಿ ಅನಿವಾರ್ಯ ಆಗಿಬಿಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ನೀಡಿರುವ ಶಾಖ ತರಂಗಾಂತರದ ಅಲೆಗಳ ಮುನ್ಸೂಚನೆಯನ್ನಾಧರಿಸಿ ಹಗರಿ ಕೃಷಿ ವಿಜ್ಞಾನ ಕೇಂದ್ರವು ಸ್ಪಷ್ಟನೆ ನೀಡಿದೆ.
ಒಣಹವೆ - ಮುಂಜಾಗ್ರತೆ ಕ್ರಮ ಕುರಿತು ಮಾಹಿತಿ ಬಳ್ಳಾರಿ ತಾಲೂಕಿನ ಹಗರಿ ಗ್ರಾಮದ ಬಳಿ ಇರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕಳೆದ ತಿಂಗಳಷ್ಟೇ ಅಳವಡಿಸಲಾಗಿದ್ದ ಅತ್ಯಾಧುನಿಕ ಈ ಶಾಖ ತರಂಗಾಂತರ ಅಲೆಗಳ ಮಾಪನ ಶಾಸ್ತ್ರದ ಅಂಕಿ-ಸಂಖ್ಯೆಗಳು ಸದ್ಯದ ಮಟ್ಟಿಗೆ ಬಿಸಿಲಿನ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತಲೂ ತಗ್ಗಲಿದೆಯಾದ್ರೂ ಒಣಹವೆ ಮಾತ್ರ ವಿಪರೀತವಾಗಿ ಇರಲಿದೆ.
ಉಭಯ ಜಿಲ್ಲೆಗಳ ಸಾರ್ವಜನಿಕರು, ರೈತಾಪಿ ವರ್ಗ ಹಾಗೂ ಶ್ರಮಿಕ ವರ್ಗವು ಬಿರಿಬಿಸಿಲಿನ ತಾಪಮಾನ ಮತ್ತು ಒಣಹವೆಯಿಂದ ವಿಮುಖರಾಗಲು ಮುಂಜಾಗ್ರತೆ ಕ್ರಮಗಳನ್ನ ಕಡ್ಡಾಯವಾಗಿ ಪಾಲಿಸಲೇಬೇಕು ಎನ್ನುತ್ತಾರೆ ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು.
ಈ ಕುರಿತು ಪ್ರತಿಕ್ರಿಯಿಸಿರುವ ಐಸಿಎಆರ್- ಹಗರಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ರಮೇಶ್ ಬಿ.ಕೆ., ಬಿರುಬಿಸಿಲು ಕಾಲಕ್ರಮೇಣ ತಗ್ಗುವ ಮುನ್ಸೂಚನೆ ಈಗಾಗಲೇ ಬಂದಿದೆಯಾದ್ರೂ ಒಣಹವೆ ಯಥಾಸ್ಥಿತಿಯಲ್ಲಿ ಇರಲಿದೆ. ಹೀಗಾಗಿ ಉಭಯ ಜಿಲ್ಲೆಯ ಸಾರ್ವಜನಿಕರು ಮುಂಜಾಗ್ರತೆ ಕ್ರಮವನ್ನು ವಹಿಸಲೇಬೇಕು. ಅದರಲ್ಲೂ ಎಳೆಯ ಮಕ್ಕಳು ಹಾಗೂ ವಯಸ್ಕರು ಈ ಶಾಖ ತರಂಗಾಂತರದಿಂದ ದೂರ ಇರಲೇಬೇಕು. ಆಗಾಗ ತಂಪು ನೀರು, ಪಾನೀಯ ಕುಡಿಯುವುದು ಮತ್ತು ತೆಳುಪಾದ ಹತ್ತಿ ಬಟ್ಟೆಗಳನ್ನು ಧರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:RCB ಅಭಿಮಾನಿಯಿಂದ ಕಲ್ಲಂಗಡಿಯಲ್ಲಿ ಅರಳಿತು ‘ಈ ಸಲ ಕಪ್ ನಮ್ದೇ’ ಸ್ಲೋಗನ್
ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕದ ಕೃಷಿ ಹವಾಮಾನ ಶಾಸ್ತ್ರದ ವಿಷಯ ತಜ್ಞ ಜಗದೀಶ ನಾಯ್ಕ್ ಮಾತನಾಡಿ, ಕಳೆದ 2018ರಲ್ಲಿ ಸತತ ನಾಲ್ಕು ದಿನಗಳ ಕಾಲ ಶೇ. 42 ಡಿಗ್ರಿಯಷ್ಟು ಶಾಖ ತರಂಗಾಂತರ ಕಂಡುಬಂದಿತ್ತು. 2019ರಲ್ಲಿ ಸತತ ಮೂರು ದಿನಗಳು ಹಾಗೂ 2020ರಲ್ಲಿ ಕೇವಲ ಒಂದೇ ದಿನ ಇಷ್ಟೊಂದು ಪ್ರಮಾಣದ ಶಾಖ ತರಂಗಾಂತರ ಕಂಡುಬಂದಿತ್ತು. ಆದರೆ, ಈ ಬಾರಿ ಶೇ. 40 ಡಿಗ್ರಿ ಸೆಲ್ಸಿಯಸ್ ಒಳಗಡೆಯೇ ಈ ಶಾಖ ತರಂಗಾಂತರ ಕಂಡುಬರುತ್ತಿದೆ. ಅದು ಮುಂದಿನ ಹದಿನೈದು ದಿನಗಳವರೆಗೂ ಕೂಡ ಸರಾಸರಿ 36ರಿಂದ 40 ಡಿಗ್ರಿ ಸೆಲ್ಸಿಯಸ್ನಷ್ಟು ಶಾಖ ತರಂಗಾಂತರ ಇರೋ ಮುನ್ಸೂಚನೆಯನ್ನು ಭಾರತೀಯ ಹವಮಾನ ಇಲಾಖೆಯು ನೀಡಿದೆ ಎಂದಿದ್ದಾರೆ.