ಬಳ್ಳಾರಿ: ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆಗೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಪ್ಪುಪಟ್ಟಿ ಧರಿಸಿ ಕರಾಳ ದಿನಾಚರಣೆಗೆ ಮುಂದಾಗಿದ್ದಾರೆ
ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆಗೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ವಿರೋಧ ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಕುಡಿತಿನಿ ಶ್ರೀನಿವಾಸ, ದರೂರು ಪುರುಷೋತ್ತಮ ಗೌಡ, ಸಿದ್ಮಲ್ ಮಂಜುನಾಥ, ಪಿ. ಬಂಡೇಗೌಡ, ಸಿಂಗಾಪುರ ನಾಗರಾಜ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಪ್ಪುಪಟ್ಟಿ ಧರಿಸಿ ಕರಾಳ ದಿನವನ್ನಾಗಿ ಆಚರಿಸುತ್ತೇವೆ ಎಂದರು.
ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿದ್ದರ ಕುರಿತು ನ್ಯಾಯಾಲಯದ ಮೊರೆ ಹೋಗುವುದಾಗಿ ಕುಡಿತಿನಿ ಶ್ರೀನಿವಾಸ ಎಚ್ಚರಿಕೆ ನೀಡಿದ್ದಾರೆ. ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದಲ್ಲಿಂದು ಕಪ್ಪುಪಟ್ಟಿ ಧರಿಸಿಕೊಂಡೇ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕೃತಿ ದಹನ ಮಾಡುವ ಮೂಲಕ ಕರಾಳ ದಿನ ಆಚರಿಸಲಾಗುವುದೆಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ:ವಿಜಯನಗರ ಜಿಲ್ಲೆ ರಚಿಸಿ ಅಧಿಸೂಚನೆ ಹೊರಡಿಸಿದ ಸರ್ಕಾರ : ಆನಂದ ಸಿಂಗ್ ಮುನಿಸಿಗೆ ಮುಲಾಮು
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಭಾಗಿತ್ವವೂ ಕೂಡ ಇದೆ. ಹೀಗಾಗಿ, ನಾವೆಲ್ಲರೂ ಸೇರಿಕೊಂಡು ಮುಂದಿನ ವಾರದಲ್ಲಿ ಕಾನೂನು ರೀತಿಯ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದರು.