ಬಳ್ಳಾರಿ :ಗಣಿನಾಡು ಬಳ್ಳಾರಿ ಜಿಲ್ಲೆಯಾದ್ಯಂತ ವರ್ಷಕ್ಕೆ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ವರದಿಯಾಗಿದೆ. ಈ ಪೈಕಿ ಸರಿ ಸುಮಾರು 300-350 ಮಂದಿ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ.
ಅತಿ ವೇಗದ ಸಂಚಾರ, ಹೆಲ್ಮೆಟ್ ಧಾರಣೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಅದರಲ್ಲೂ ಬೈಕ್ಗಳ ಹಿಂಬದಿಯಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿದ್ದ ಶೇ.15ರಷ್ಟು ಮಂದಿ ಸಾವನ್ನಪ್ಪಿದ್ದಾರೆ. ಇಂತಹ ಅಪಘಾತದಲ್ಲಿ ಹೆಚ್ಚು ಮಹಿಳೆಯರೇ ಸಾವನ್ನಪ್ಪಿದ್ದಾರೆಂದು ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ರಸ್ತೆ ದಾಟುವ ವೇಳೆ ಕೂಡ ಕೆಲವರು ಸಾವನ್ನಪ್ಪಿರೋದು ವರದಿಯಾಗಿದೆ.
ವರ್ಷಕ್ಕೆ ಬರೋಬ್ಬರಿ 350 ಮಂದಿ ರಸ್ತೆ ಅಪಘಾತಕ್ಕೆ ಬಲಿ!! ಗಣಿ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದ ರಸ್ತೆ ಅಪಘಾತಕ್ಕೆ ಅನೇಕ ಕಾರಣಗಳಿವೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಅತಿಯಾದ ವೇಗ, ಹೆಲ್ಮೆಟ್ ಧರಿಸದಿರುವ ವಿಚಾರ ಹೊರತುಪಡಿಸಿದ್ರೆ, ಪ್ರಮುಖ ರಸ್ತೆಗಳೇ ಹದಗೆಟ್ಟಿರೋದು ಸಹ ರಸ್ತೆ ಅಪಘಾತಕ್ಕೆ ಕಾರಣವಾಗಿದೆ.
ಅಲ್ಲದೇ, ಅಡ್ಡಾದಿಡ್ಡಿ ವಾಹನಗಳ ಸಂಚಾರ ಕೂಡ ಒಂದು ಪ್ರಮುಖ ಕಾರಣ. ಬೈಕ್ ಹಿಂಬದಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಹೆಲ್ಮೆಟ್ ಧಾರಣೆ ಮಾಡದಿರುವುದೇ ಅವರ ಸಾವಿಗೆ ಪ್ರಮುಖ ಕಾರಣವಾಗಿದೆ. ಇನ್ನು, ಕಾರಿನೊಳಗಿದ್ದ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದಿರುವುದು ಕೂಡ ಸಾವು ನೋವಿಗೆ ಕಾರಣವಾಗಿದೆ.
ಈ ಸುದ್ದಿಯನ್ನೂ ಓದಿ:ಮೂರು ತಿಂಗಳ ಗರ್ಭಿಣಿ ಪತ್ನಿಯನ್ನ ಕೊಂದ ಪತಿ.. ಅನಾಥರಾದ ಮಕ್ಕಳು!
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸೈದುಲು ಅಡಾವತ್, ಇಂತಹ ಅಪಘಾತಗಳನ್ನು ತಡೆಯಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅತಿವೇಗದ ಸಂಚಾರ ಆರೋಗ್ಯಕರ ಬೆಳವಣಿಗೆಯಲ್ಲ. ದ್ವಿಚಕ್ರ ವಾಹನ ಅಥವಾ ಲಘು ವಾಹನಗಳನ್ನು ಚಲಾವಣೆ ಮಾಡುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಚಲಾಯಿಸಬೇಕು. ವೇಗದ ಮಿತಿ ಸರಾಸರಿಯಾಗಿರಬೇಕು. ಬೈಕ್ ಚಲಾವಣೆ ವೇಳೆ ಹಿಂಬದಿ-ಮುಂಬದಿ ಸವಾರರಿಬ್ಬರೂ ಕೂಡ ಹೆಲ್ಮೆಟ್ ಧರಿಸಬೇಕು. ಕಾರಿನೊಳಗಿದ್ದ ಪ್ರಯಾಣಿಕರು ಕೂಡ ಸೀಟ್ ಬೆಲ್ಟ್ ಧರಿಸಿಕೊಳ್ಳಬೇಕೆಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.