ಬಳ್ಳಾರಿ:ಇಲ್ಲಿನ ತಿಲಕ್ ನಗರದ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಬಡಾವಣೆ 227/ಬಿ ಸರ್ವೇ ನಂಬರ್‌ದ ಜಮೀನಿನ 15 ಮೀಟರ್ ರಸ್ತೆ ನಿರ್ಮಾಣಕ್ಕೆ ಮೀಸಲಿದ್ದ ಜಾಗ ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಅನಧಿಕೃತ ಶೆಡ್ ತೆರವುಗೊಳಿಸಬೇಕೆಂದು ಒತ್ತಾಯಿಸಿ ಮಹಿಳೆಯೊಬ್ಬರು ಧರಣಿ ಕುಳಿತಿದ್ದಾರೆ.
ಈ ಜಮೀನಿನ ಕಾಂಪೌಂಡ್ ಎದುರು ಬಳ್ಳಾರಿ ಮಾಸ್ಟರ್ ಪ್ಲಾನ್ನಂತೆ (ಸಿಡಿಪಿ) ರಸ್ತೆಗೆ 15 ಮೀಟರ್ ಜಾಗ ಗುರುತಿಸಲಾಗಿದೆ. ಈ ಒತ್ತುವರಿ ಜಾಗದಲ್ಲಿ ಅನಧಿಕೃತ ಶೆಡ್ ನಿರ್ಮಾಣ ಮಾಡಿದ್ದು, ಅದನ್ನು ತೆರವುಗೊಳಿಸಬೇಕೆಂದು ಜ್ಯೋತಿ ವೀರಪ್ಪನೇನಿ ಎಂಬುವರು ಆಗ್ರಹಿಸಿದ್ದಾರೆ.
ಡಿಸಿಗೆ ದೂರು:ಮಹಾತ್ಮ ಗಾಂಧೀಜಿ ಭಾವಚಿತ್ರ ಮತ್ತು ರಾಷ್ಟ್ರಧ್ವಜ ಇಟ್ಟುಕೊಂಡು, ಏಕಾಂಗಿಯಾಗಿ ಧರಣಿ ನಡೆಸುತ್ತಿರುವ ಜ್ಯೋತಿ ಅವರು, ಕರ್ನಾಟಕ ಗೃಹ ಮಂಡಳಿ 227/ಬಿ ಸರ್ವೇ ನಂಬರ್‌ನಲ್ಲಿ 1985– 86ರಲ್ಲಿ ಬಡಾವಣೆ ಅಭಿವೃದ್ಧಿಪಡಿಸಿ ಹಂಚಿಕೆ/ ಹರಾಜು ಮೂಲಕ ಮಾರಲಾಗಿತ್ತು. ಮಾಸ್ಟರ್ ಪ್ಲಾನ್‌ನಿಂದ ರಸ್ತೆ ಮತ್ತಿತರ ಮೂಲಸೌಕರ್ಯ ಸಹ ಒದಗಿಸಲಾಗಿದೆ. ಬಡಾವಣೆ ಮಹಾನಗರಪಾಲಿಕೆಗೆ ಹಸ್ತಾಂತರ ಬಳಿಕ ರಸ್ತೆಗಳನ್ನು ಪಾಲಿಕೆ ನಿರ್ವಹಣೆ ಮಾಡುತ್ತಿದೆ. ರಸ್ತೆ ಜಾಗ ಒತ್ತುವರಿ ಸಂಬಂಧ ಜ್ಯೋತಿ ಡಿಸಿಗೆ ದೂರು ನೀಡಿದ್ದರು. ದೂರಿನನ್ವಯ ಜಿಲ್ಲಾಧಿಕಾರಿ ಅವರು ಪಾಲಿಕೆಗೆ ವರದಿ ಕೇಳಿದ್ದರು.
ಬಳ್ಳಾರಿಯಲ್ಲಿ ಮಹಿಳೆ ಏಕಾಂಗಿ ಧರಣಿ ಜಾಗ ಒತ್ತುವರಿ:ಕೆಎಚ್‌ಬಿ ನಿರ್ಮಾಣದ ಬಡಾವಣೆ ಮೂಲ ಸ್ವರೂಪಕ್ಕೆ ಅನುಗುಣವಾಗಿ ಇರದೆ, ಒತ್ತುವರಿ ಕಂಡುಬಂದಿದೆ. ಒತ್ತುವರಿಗಳನ್ನು ಪಾಲಿಕೆ ತೆರವುಗೊಳಿಸಬಹುದು’ ಎಂದು ಡಿ.ಸಿ ಗೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಲಾಗಿದೆ. 2022ರ ಅಕ್ಟೋಬರ್ 12ರಂದು ಈ ವರದಿ ಸಲ್ಲಿಸಲಾಗಿದೆ. ವರದಿ ಸಲ್ಲಿಕೆಗೆ ಮುನ್ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅನಧಿಕೃತ ಶೆಡ್ ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡುವಂತೆ ಕೆಎಚ್‌ಬಿ, ಪಾಲಿಕೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಗೂ ಮನವಿ ಸಲ್ಲಿಸಿದರೂ ಪ್ರಯೋಜನ ಆಗದಿದ್ದರಿಂದ ಈ ಧರಣಿ ಆರಂಭಿಸಲಾಗಿದೆ’ ಎಂದು ಜ್ಯೋತಿ ಅವರು ತಿಳಿಸಿದ್ದಾರೆ. ಅಲ್ಲದೆ, ಇದೇ ವೇಳೆ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಅವರು ಪ್ರದರ್ಶಿಸಿದರು.
ಇದನ್ನೂ ಓದಿ:ಬೆಳಗಾವಿ-ರಾಯಚೂರು ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ