ಬಳ್ಳಾರಿ: ಅನಾರೋಗ್ಯದ ಹಿನ್ನೆಲೆಯಲ್ಲಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಎಂ.ಲಕ್ಷ್ಮೀನಾರಾಯಣರೆಡ್ಡಿ (50) ನಿಧನರಾಗಿದ್ದಾರೆ.
ಕಳೆದ 2019ರ ಮಾರ್ಚ್ ತಿಂಗಳಲ್ಲಿ ವಿಮ್ಸ್ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡ ಡಾ.ಲಕ್ಷ್ಮೀನಾರಾಯಣರೆಡ್ಡಿಯವರು, ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನ ಹೈದರಾಬಾದ್ಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಅಸುನೀಗಿದ್ದಾರೆ.
ಮೃತರು ಸಿರುಗುಪ್ಪಾದ ಮಾಜಿ ಶಾಸಕ ದಿವಂಗತ ಎಂ.ಶಂಕರ ರೆಡ್ಡಿಯವರ ಪುತ್ರರಾಗಿದ್ದು, ತಾಯಿ ಮೀನಾಕ್ಷಮ್ಮ, ಪತ್ನಿ ಡಾ.ಶ್ರೀ ಪ್ರದಾ, ಪುತ್ರಿ ಗೌರಿರೆಡ್ಡಿಯವರನ್ನ ಅಗಲಿದ್ದಾರೆ. ಮೃತರಾದ ಲಕ್ಷ್ಮೀನಾರಾಯಣ ರೆಡ್ಡಿ ಮೂಲತಃ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಿ.ಎಂ.ಸೂಗೂರು ಗ್ರಾಮದವರಾಗಿದ್ದು, ನಾಳೆ ಸ್ವಗ್ರಾಮಕ್ಕೆ ಮೃತದೇಹವನ್ನು ತಂದು ಅಂತ್ಯಕ್ರಿಯೆ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.
2013ರಲ್ಲಿ ಸರಿಸುಮಾರು ಹದಿನೆಂಟು ತಿಂಗಳ ಅವಧಿಗೆ ವಿಮ್ಸ್ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. 2019ರ ಮಾರ್ಚ್ನಲ್ಲಿ ಪುನಃ ವಿಮ್ಸ್ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದರು. ಕೇವಲ ಎಂಟು ತಿಂಗಳು ಮಾತ್ರ ಅಧಿಕಾರ ಅನುಭವಿಸಿದ್ದಾರೆ. ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಿ.ಎಂ.ಸೂಗೂರು ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಸಿರುಗುಪ್ಪಾದಲ್ಲಿ ಪ್ರೌಢಶಿಕ್ಷಣ ಹಾಗೂ ಬೆಂಗಳೂರಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದ್ದಾರೆ. ದಾವಣಗೆರೆಯಲ್ಲಿ ಮೆಡಿಕಲ್ ಆ್ಯಂಡ್ ಎಂ.ಡಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಅವರ ಅಗಲಿಕೆಗೆ ವಿಮ್ಸ್ ನ ವೈದ್ಯಾಧಿಕಾರಿಗಳು ಹಾಗೂ ನಿರ್ದೇಶಕರು ಕಂಬನಿ ಮಿಡಿದಿದ್ದಾರೆ.