ಬಳ್ಳಾರಿ: ಬಳ್ಳಾರಿ ಅಂದಾಕ್ಷಣ ನಮಗೆ ಥಟ್ಟನೆ ನೆನಪಾಗೋದು ಗಣಿಯ ಧೂಳು. ಆದ್ರೆ ಈಗ ಅಲ್ಲಿನ ಪರಿಸ್ಥಿತಿ ಕೊಂಚ ಭಿನ್ನವಾಗಿದೆ. ಈಗ ಆ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆ ಸುರಿದ ಕಾರಣ ಇಲ್ಲಿನ ವಾತಾವರಣ ಮಲೆನಾಡಿನಂತಾಗಿದೆ. ಅದರಲ್ಲೂ ಮಿಂಚೇರಿ ಹಿಲ್ಸ್ ಈಗ ಪ್ರವಾಸಿಗರ ನೆಚ್ಚಿನ ತಾಣವಾಗಿ ಬದಲಾಗಿದೆ.
ಹೌದು, ಗಣಿನಾಡು ಬಳ್ಳಾರಿಯಲ್ಲಿ ಮಲೆನಾಡಿನ ಸೌಂದರ್ಯ ಮನೆ ಮಾಡಿದೆ. ಬಳ್ಳಾರಿ ತಾಲೂಕಿನಿಂದ 18 ಕಿ. ಮೀ ದೂರದಲ್ಲಿರುವ ಮಿಂಚೇರಿ ಅರಣ್ಯ ಪ್ರದೇಶ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಸುಮಾರು 2625 ಎಕರೆ ವಿಸ್ತೀರ್ಣದ ಈ ಅರಣ್ಯ ಪ್ರದೇಶದಲ್ಲಿ ಬೆಟ್ಟ-ಗುಡ್ಡಗಳು, ಪ್ರಕೃತಿ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.
ಪ್ರವಾಸಿಗರಿಗೆ ಹೊಸ ಅನುಭವ: ಮಿಂಚೇರಿ ಹಿಲ್ಸ್ನಲ್ಲಿ ನ್ಯಾಯಾಧೀಶರ ಬಂಗ್ಲೆಯನ್ನ ಅರಣ್ಯ ಇಲಾಖೆ 60 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ಬ್ರಿಟಿಷರ ಕಾಲದ ಜಡ್ಜ್ ಮನೆ ಈಗ ಪ್ರವಾಸಿಗರಿಗೆ ಅಚ್ಚುಮೆಚ್ಚು. ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿರುವ ಮಿಂಚೇರಿ ಅರಣ್ಯ ಪ್ರದೇಶದ ಸೌಂದರ್ಯ ವೀಕ್ಷಿಸಲು ನಿತ್ಯ ಸಾವಿರಾರು ಜನರು ಬರುತ್ತಿದ್ದಾರೆ. ಮಲೆನಾಡಿನ ಅನುಭವ ನೀಡುತ್ತಿರುವ ಬಿಸಿಲನಾಡಿನ ಈ ಪ್ರದೇಶವನ್ನ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಬೇಕು ಅನ್ನೋದು ಪ್ರವಾಸಿಗರ ಮಾತು.
ಡಿಎಫ್ಒ ಸಂದೀಪ್ ಸೂರ್ಯವಂಶಿ ಅವರು ಮಾತನಾಡಿದರು ಪ್ರತಿವರ್ಷ ಸಮರ್ಪಕ ಮಳೆ ಇಲ್ಲದೇ ಇಲ್ಲಿನ ಗುಡ್ಡಬೆಟ್ಟಗಳು, ಇಲ್ಲಿನ ಪರಿಸರ ಬೆಂದು ಹೋಗುತ್ತಿತ್ತು. ಆದ್ರೆ ಈಗ ಉತ್ತಮ ಮಳೆಯಿಂದ ಮಿಂಚೇರಿ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಮಿಂಚೇರಿ ಹಿಲ್ಸ್ ಈಗ ಪ್ರವಾಸಿಗರ ಟ್ರೆಕ್ಕಿಂಗ್ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಬಳ್ಳಾರಿ ನಗರದಿಂದ 18 ಕಿ ಮೀ ದೂರದಲ್ಲಿಯೇ ಈ ಪ್ರವಾಸಿ ತಾಣವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ತೆರಳುತ್ತಿದ್ದಾರೆ.
ಓದಿ:ಬೆಂಗಳೂರಲ್ಲಿ ಗಣೇಶೋತ್ಸವದ ಅನುಮತಿಗೆ 63 ಏಕಗವಾಕ್ಷಿ ಕೇಂದ್ರ.. ಪಿಒಪಿ ಗಣೇಶ ಮೂರ್ತಿ ತಯಾರಿಕೆ ನಿಷೇಧ