ಬಳ್ಳಾರಿ:ಕಳೆದ ಆರು ತಿಂಗಳಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಸರಿಸುಮಾರು 247 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, 16 ಬಾಲ್ಯ ವಿವಾಹಿತ ಜೋಡಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಕೆಲವರು ಜೈಲು ಪಾಲಾದರೆ, ಕೆಲವರು ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ.
ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಲ್ಲೇ ಜಿಲ್ಲೆಯ ನಾನಾ ತಾಲೂಕು, ಪಟ್ಟಣ, ನಗರ ಪ್ರದೇಶ, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ನಡೆಯಲು ನಿಶ್ಚಯವಾಗಿದ್ದ ಬಾಲ್ಯ ವಿವಾಹಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಯು.ನಾಗರಾಜ ಅವರ ಸೂಚನೆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ತಡೆದಿದೆ.
ಆದರೆ, 16 ಬಾಲ್ಯ ವಿವಾಹಗಳು ನಡೆದೇ ಹೋಗಿದ್ದವು. ಅವುಗಳನ್ನ ತಡೆಯಲು ಸಾಧ್ಯವಾಗದ ಕಾರಣ ಆ ಮದುವೆಯೊಳಗೆ ಭಾಗಿಯಾಗಿದ್ದ ಎಲ್ಲರ ಮೇಲೂ ಎಫ್ ಐಆರ್ ದಾಖಲು ಮಾಡಲಾಗಿದ್ದು, ಬಾಲ್ಯ ವಿವಾಹಿತರು - ಅವಲಂಬಿತ ಪೋಷಕರು ಹಾಗೂ ಊಟೋಪಚಾರದಲ್ಲೂ ಭಾಗಿಯಾಗಿದ್ದವರ ವಿರುದ್ಧವೂ ಈಗಾಗಲೇ ಪ್ರಕರಣ ದಾಖಲಾಗಿದೆ. ಹಲವರನ್ನ ಜೈಲಿಗಟ್ಟಲಾಗಿದೆ. ಕೆಲವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಜಿಲ್ಲಾಡಳಿತವು ಬಾಲ್ಯ ವಿವಾಹದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ಮೇಲೂ ಪ್ರಕರಣ ದಾಖಲಿಸಲು ಸೂಚನೆ ನೀಡಿದೆ.
ಊಟೋಪಚಾರದಲ್ಲಿ ಭಾಗಿಯಾಗಿದ್ದ ಫೋಟೋಗಳು ಆಲ್ಬಂನಲ್ಲಿದ್ದರೆ ಸಾಕು, ಅವರ ಮೇಲೂ ಕೇಸ್ ಬುಕ್ ಮಾಡಲು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸೈಯದ್ ಚಾಂದ್ ಬಾಷಾ ಅವರು, ಬಾಲ್ಯ ವಿವಾಹ ತಡೆಯುವಲ್ಲಿ ಇಲಾಖೆಯು ಬಹಳಷ್ಟು ಶ್ರಮಿಸುತ್ತಿದೆ. ಬಾಲ್ಯ ವಿವಾಹಕ್ಕೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಬೆಂಬಲಿಸಿದವರೆಲ್ಲರ ಮೇಲೂ ಪ್ರಕರಣ ದಾಖಲಿಸಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ನಿಶ್ಚಯವಾಗಿದ್ದ 231 ಬಾಲ್ಯ ವಿವಾಹಗಳನ್ನು ನಡೆಯೋದಕ್ಕೂ ಮುಂಚೆಯೇ ತಡೆಯಲಾಗಿತ್ತು. 16 ಬಾಲ್ಯ ವಿವಾಹಗಳು ನಡದೇ ಹೋಗಿದ್ದವು. ಅದನ್ನ ತಡೆಯಲು ಆಗದಿದ್ದರಿಂದ ಅವರ ಅವಲಂಬಿತರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಸೈಯದ್ ಚಾಂದ್ ಬಾಷಾ ತಿಳಿಸಿದ್ರು.