ಬಳ್ಳಾರಿ: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಈವರೆಗೂ ಏಳು ಮಂದಿ ಕೋವಿಡ್ನಿಂದ ಮೃತಪಟ್ಟಿದ್ದು, ಇವರಲ್ಲಿ 40 ವರ್ಷ ವಯೋಮಾನದ ಐವರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಳು ಮಂದಿ ಪೊಲೀಸ್ ಸಿಬ್ಬಂದಿ ಮಹಾಮಾರಿ ಕೋವಿಡ್ಗೆ ಬಲಿಯಾಗಿದ್ದಾರೆ. ಅವರ ಆತ್ಮಕ್ಕೆ ಆ ಭಗವಂತ ಶಾಂತಿ ನೀಡಲಿ ಎಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಮೃತ ಪೊಲೀಸ್ ಸಿಬ್ಬಂದಿಯ ಅವಲಂಬಿತ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯವನ್ನು ಮುಂದಿನ ದಿನಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಮಾಡಲಿದೆ ಎಂದು ಭರವಸೆ ನೀಡಿದರು.