ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ವೃದ್ಧೆಯ ಮೇಲೆ ಕೋತಿಯೊಂದು ದಾಳಿ ಮಾಡಿದೆ. ಏಕಾಏಕಿ ಅಜ್ಜಿಯ ಮೇಲೆರಗಿ ತಲೆಗೆ ಪರಚಿ ಗಂಭೀರವಾಗಿ ಗಾಯಗೊಳಿಸಿದೆ.
ದಾಳಿಯಿಂದ ಗಾಯಗೊಂಡ ವೃದ್ಧೆಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ಮನೆಯವರು ಕೋತಿಯನ್ನೋಡಿಸಿ ವೃದ್ಧೆಯನ್ನು ಕಾಪಾಡಿದ್ದಾರೆ. ಗಾಯಾಳುವನ್ನು ಕೂಡಲೇ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೋತಿ ದಾಳಿಗೆ ಒಳಗಾಗಿರುವ ವೃದ್ಧೆ ಹಲವು ತಿಂಗಳಿನಿಂದಲೂ ಈ ಮತಿಹೀನ ಮಂಗ ಗ್ರಾಮಸ್ಥರ ಮೇಲೆ ಮಿತಿಮೀರಿ ಹಾವಳಿ ಮಾಡುತ್ತಿದೆ. ಈ ಕೋತಿಯನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಅರಣ್ಯಾಧಿಕಾರಿಗಳಿಗೆ, ಗ್ರಾಮ ಪಂಚಾಯತಿಯವರಿಗೆ ಮೌಖಿಕವಾಗಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗನ ದಾಳಿಗೆ ಈ ಹಿಂದೆ ಸಾಕಷ್ಟು ಗ್ರಾಮಸ್ಥರು ತುತ್ತಾಗಿದ್ದರೂ ಈವರೆಗೂ ಸಂಬಂಧಿಸಿದ ಅರಣ್ಯ ಇಲಾಖೆ ಈ ಕಿಡಿಗೇಡಿ ಕೋತಿಯನ್ನು ಹಿಡಿಯುವ ಪ್ರಯತ್ನ ಕೂಡ ಮಾಡಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.