ಬಳ್ಳಾರಿ: ಜಿಲ್ಲೆಯ ತಹಶೀಲ್ದಾರ್ ಕಚೇರಿಗಳ ನಾನಾ ಸಿಬ್ಬಂದಿಗೆ ಕೋವಿಡ್ ಸೋಂಕು ಹರಡಿದ್ದರೂ ಕೂಡ ನಾಗರಿಕ ಸೇವೆಗಳಿಗೆ ಯಾವುದೇ ತೀರಿಯಾಗಿ ಅಡ್ಡಿಯುಂಟಾಗಿಲ್ಲ. ಕಳೆದೊಂದು ತಿಂಗಳ ಹಿಂದಷ್ಟೇ ಜಿಲ್ಲೆಯ ನಾನಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೋವಿಡ್ ಸೋಂಕಿಗೀಡಾಗಿದ್ದರು. ಕೃಷಿ ಇಲಾಖೆಯ ಮೂವರು ಸೋಂಕಿನಿಂದ ಮೃತಪಟ್ಟಿದ್ದರು.
ಆದ್ದರಿಂದ ಕೇವಲ ಒಂದೇ ಒಂದು ದಿನ ಮಾತ್ರ ಕಂದಾಯ (ತಹಶೀಲ್ದಾರ್), ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಕಚೇರಿಗಳಲ್ಲಿ ದೈನಂದಿನ ಕಾರ್ಯಗಳು ಸ್ಥಗಿತಗೊಂಡಿದ್ದವು. ಬಳಿಕ ಸ್ಯಾನಿಟೈಸ್ ಮಾಡಿಸುವ ಮೂಲಕ ಪುನಃ ತಮ್ಮ ಕಾರ್ಯಗಳನ್ನು ಆರಂಭಿಸಿದವು.
ಬಳ್ಳಾರಿ ಜಿಲ್ಲಾಡಳಿತದ ಕಚೇರಿಯಲ್ಲಿ ಅಂದಾಜು 14 ಮಂದಿ ಹಾಗೂ ಕಂದಾಯ (ತಹಶೀಲ್ದಾರ್) ಇಲಾಖಾ ಕಚೇರಿಯಲ್ಲಿ 17 ಮಂದಿ ಮತ್ತು ಕೃಷಿ ಇಲಾಖೆಯ ಬಹುತೇಕರಿಗೆ ಕೋವಿಡ್ ಸೋಂಕು ತಗುಲಿತ್ತು. ಕೋವಿಡ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ರೆವಿನ್ಯೂ ಸ್ಟ್ಯಾಂಪ್ ವಿತರಣೆ ಹಾಗೂ ರಿಯಲ್ ಎಸ್ಟೇಟ್ ದಂಧೆಯೂ ಕೂಡ ಜೋರಾಗಿ ಸಾಗುತ್ತಿದೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಬಳ್ಳಾರಿ ತಾಲೂಕು ತಹಶೀಲ್ದಾರ್ ಯು.ನಾಗರಾಜ ಅವರು, ತಹಶೀಲ್ದಾರ್ ಕಚೇರಿಯಲ್ಲೇ ಅಂದಾಜು 17 ಮಂದಿಗೆ ಕೋವಿಡ್ ಸೋಂಕು ಹರಡಿತ್ತು. ಅವರೆಲ್ಲರೂ ಗುಣಮುಖರಾಗಿ ಸದ್ಯ ಕೆಲಸಕ್ಕೆ ಹಾಜರಾಗಿದ್ದಾರೆ.
ತಾಲೂಕಿನ ನಾನಾ ಗ್ರಾಮೀಣ ಪ್ರದೇಶಗಳಿಂದ ಬರುವ ರೈತಾಪಿವರ್ಗ ಹಾಗೂ ಸಾರ್ವಜನಿಕ ಸೇವೆಗೆ ದಿನದ 24 ಗಂಟೆ ಕಾರ್ಯನಿರ್ವಹಿಸಿ ನಾಗರಿಕ ಸೇವೆಗೆ ಯಾವುದೇ ಅಡ್ಡಿಯುಂಟಾಗದಂತೆ ನೋಡಿಕೊಂಡಿದ್ದೇವೆ ಎಂದರು.