ಕರ್ನಾಟಕ

karnataka

ETV Bharat / state

ಬಳ್ಳಾರಿ: ಮದುವೆಯಾಗಿ 10 ವರ್ಷದ ಬಳಿಕ ಹುಟ್ಟಿದ ಮಗು.. ಮೆಂಥೋಪ್ಲಸ್‌ ಡಬ್ಬಿ ನುಂಗಿ ಸಾವು!

ಮೆಂಥೋಪ್ಲಸ್ ಡಬ್ಬಿ ನುಂಗಿ ಪುಟ್ಟ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

Etv Bharat
Etv Bharat

By

Published : Jun 10, 2023, 8:39 AM IST

Updated : Jun 10, 2023, 9:02 AM IST

ಬಳ್ಳಾರಿ:ನೋವು ನಿವಾರಕ ಮೆಂಥೋಪ್ಲಸ್ ಸಣ್ಣ ಡಬ್ಬಿಯನ್ನು ನುಂಗಿ 9 ತಿಂಗಳು ಮಗು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ 5ನೇ ವಾರ್ಡ್​ನ ಇಂದಿರಾ ನಗರದ ನಿವಾಸಿಗಳಾದ ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಪುತ್ರಿ 'ಪ್ರಿಯದರ್ಶಿನಿ' ಮನೆಯಲ್ಲಿ ಆಟವಾಡುತ್ತಿರುವಾಗ ಮೆಂಥೋಪ್ಲಸ್ ಡಬ್ಬಿ ನುಂಗಿದ್ದಾಳೆ.

ಆಕೆ ಅಳುತ್ತಾ ಬಂದಾಗ ತಾಯಿ ತುಳಸಿ ಅವರು ಗಂಟಲಲ್ಲಿ ಸಿಲುಕಿದ್ದ ಡಬ್ಬಿಯನ್ನು ತೆೆಗೆಯಲು ಪ್ರಯತ್ನಿಸಿದ್ದಾರೆ. ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ತಕ್ಷಣವೇ ವೈದ್ಯರ ಬಳಿ ಮಗುವನ್ನು ಕರೆದೊಯ್ಯಲಾಗಿದೆ. ಆದರೆ, ಪ್ರಯೋಜನವಾಗಲಿಲ್ಲ. 'ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆಯೇ ಮಗು ಮೃತಪಟ್ಟಿತ್ತು. ಆದರೂ ಪಾಲಕರು ಕೋರಿದಾಗ, ಗಂಟಲಲ್ಲಿದ್ದ ಡಬ್ಬಿ ಹೊರ ತೆಗೆಯಲಾಯಿತು' ಎಂದು ಮಕ್ಕಳ ವೈದ್ಯರು ತಿಳಿಸಿದ್ದಾರೆ.

ಮುತ್ಯಾಲ ರಾಘವೇಂದ್ರ ಹಾಗೂ ತುಳಸಿ ಮದುವೆಯಾಗಿ 10 ವರ್ಷಗಳ ಬಳಿಕ ಈ ಮಗು ಜನಿಸಿತ್ತು ಎಂಬ ಮಾಹಿತಿ ಅವರ ಕುಟುಂಬ ಮೂಲಗಳಿಂದ ಹೊರ ಬಿದ್ದಿದೆ. ಈಗ ಅದೇ ಮಗು ಮೆಂಥೋಪ್ಲಸ್​​​ ಡಬ್ಬಿ ನುಂಗಿ ಪ್ರಾಣ ಕಳೆದುಕೊಂಡಿರುವುದು, ತಂದೆ - ತಾಯಿಗಳನ್ನ ಅಪಾರ ದುಃಖದ ಮಡುವಿನಲ್ಲಿ ಬೀಳುವಂತೆ ಮಾಡಿದೆ.

ಆ್ಯಸಿಡ್ ಕುಡಿದು ಮಗು ಸಾವು: ಮನೆಯ ಹೊರಗಡೆ ಆಟ ಆಡುತ್ತಿದ್ದ ಒಂದು ವರ್ಷದ ಹೆಣ್ಣು ಮಗು ಆ್ಯಸಿಡ್​ ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ಸೂರತ್​ನ ಲಿಂಬಾಯತ್​ ಎಂಬಲ್ಲಿ ಇತ್ತೀಚೆಗೆ ನಡೆದಿತ್ತು. ಮೃತ ಮಗುವನ್ನು ಅಮಿನಾ ಶಾಹಿದ್​ ಮನ್ಸೂರಿ (1) ಎಂದು ಗುರುತಿಸಲಾಗಿತ್ತು. ಮಾರ್ಚ್​ 30ರ ಗುರುವಾರ ಸಂಜೆ 7.30 ಸುಮಾರಿಗೆ ಘಟನೆ ನಡೆದಿತ್ತು. ಮಗುವಿನ ತಾಯಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಮಗು ಮನೆಯ ಹೊರಗಡೆ ಆಟ ಆಡುತ್ತಿತ್ತು. ಆಟ ಆಡುತ್ತಲೇ ಹೊರಗಿದ್ದ ಸ್ನಾನಗೃಹಕ್ಕೆ ತೆರಳಿದ್ದು, ಅಲ್ಲಿದ್ದ ಬಾಟಲಿಯ ಮುಚ್ಚಳ ತೆಗೆದು ಆ್ಯಸಿಡ್ ಕುಡಿದಿತ್ತು. ಜೋರಾಗಿ ಅಳಲಾರಂಭಿಸಿದೆ. ತಕ್ಷಣ ಓಡಿ ಬಂದ ತಾಯಿ ಮಗುವನ್ನು ಆಸ್ಪತ್ರೆಗೆ ಆಟೋದಲ್ಲಿ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಆರೋಗ್ಯ ತೀರಾ ಹದಗೆಟ್ಟಿತ್ತು. ವೈದ್ಯರು ಮಗುವಿನ ಪ್ರಾಣ ಉಳಿಸಲು ಎಷ್ಟೇ ಪ್ರಯತ್ನಪಟ್ಟರೂ ಏಪ್ರಿಲ್​ 4 ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿತ್ತು.

ಈ ಬಗ್ಗೆ ನ್ಯೂ ಸಿವಿಲ್ ಆಸ್ಪತ್ರೆಯ ಡಾ. ಶೀತಲ್ ಮಾತನಾಡಿ, ಮಾರ್ಚ್​ 30ರಂದು ಘಟನೆ ನಡೆದಿದೆ. ಮಗುವಿನ ತಾಯಿ ಬೆಳಗ್ಗೆ ಸುಮಾರು 7.15ರ ವೇಳೆಗೆ ಆಟೋ ರಿಕ್ಷಾದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆತಂದರು. ಅವರು ಆಸ್ಪತ್ರೆಯ ಹೊರಗಡೆ ಮಗು ಆ್ಯಸಿಡ್​ ಕುಡಿದಿರುವುದಾಗಿ ಜೋರಾಗಿ ಅಳಲು ಆರಂಭಿಸಿದರು. ಅಲ್ಲಿಗೆ ಧಾವಿಸಿದ ವೈದ್ಯರ ತಂಡ ತಕ್ಷಣ ಮಗುವಿಗೆ ಚಿಕಿತ್ಸೆ ನೀಡಲು ಆರಂಭಿಸಿತು. ಆದರೆ ಕಳೆದ ದಿನ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿತು ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ:ಬಾತ್‌ರೂಂನಲ್ಲಿದ್ದ ಆ್ಯಸಿಡ್ ಕುಡಿದು ಮಗು ಸಾವು

ಕಟ್ಟಡದಿಂದ ಬಿದ್ದು ಮಗು ಸಾವು: ಊಟ ಮಾಡಿಸುತ್ತಿದ್ದಾಗ ಕಟ್ಟಡದಿಂದ ಬಿದ್ದು ಮಗು ಸಾವನ್ನಪ್ಪಿರುವ ದಾರುಣ ಘಟನೆ ತಡರಾತ್ರಿ ಚಾಮರಾಜಪೇಟೆಯ ಆಜಾದ್ ನಗರದಲ್ಲಿ ಇತ್ತೀಚೆಗೆ ನಡೆದಿತ್ತು. ಒಂದೂವರೆ ವರ್ಷದ ಹೆಣ್ಣು ಮಗು ದೀಕ್ಷಾ ಮೃತ ಮಗು. ವಿನಯ್ ಮತ್ತವರ ಪತ್ನಿ ಮಗುವನ್ನು ಮನೆಯಲ್ಲಿ ಬಿಟ್ಟು ಸ್ನೇಹಿತರ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆಯ ಸುಮಾರಿಗೆ ಅಜ್ಜಿ ಮೊಮ್ಮಗಳಿಗೆ (ದೀಕ್ಷಾ) ಊಟ ಮಾಡಿಸುತ್ತಿದ್ದರು. ಆಟವಾಡುತ್ತ ಬಾಲ್ಕನಿಯಲ್ಲಿದ್ದ ಕಬ್ಬಿಣದ ಸರಳು ಹಿಡಿದು ಮೇಲೆ ಹತ್ತಿದ ಮಗು ನೋಡುನೋಡುತ್ತಿದ್ದಂತೆ ಜಾರಿ ಕೆಳಗೆ ಬಿದ್ದಿದೆ. ಕೂಡಲೇ ಅಕ್ಕಪಕ್ಕದವರ ನೆರವಿನಿಂದ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿತ್ತು.

ಇದನ್ನೂ ಓದಿ:ಬೆಂಗಳೂರು: ಊಟ ಮಾಡಿಸುವಾಗ ಕಟ್ಟಡದಿಂದ ಬಿದ್ದು ಮಗು ಸಾವು

Last Updated : Jun 10, 2023, 9:02 AM IST

ABOUT THE AUTHOR

...view details