ಬಳ್ಳಾರಿ: "ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವವನ್ನು ನಾಡ ಹಬ್ಬವಾಗಿ ಶಾಶ್ವತವಾಗಿ ಆಯೋಜಿಸಲಾಗುವುದು. 1998ರಲ್ಲಿ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ಹಂಪಿ ಉತ್ಸವ ಆರಂಭಿಸಲಾಯಿತು. ಜಿಲ್ಲೆ ವಿಭಜನೆಯ ನಂತರ ಎಸ್.ಆರ್.ಬೊಮ್ಮಾಯಿ ಮಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇರುವ ಈ ಸಂದರ್ಭದಲ್ಲಿ ಬಳ್ಳಾರಿ ಉತ್ಸವವನ್ನು ಪ್ರಾರಂಭಿಸಲಾಗಿದೆ" ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರ ಮುನ್ಸಿಪಲ್ ಮೈದಾನದ ರಾಘವ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಬಳ್ಳಾರಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಇಂದು ಚಾಲನೆ ನೀಡಿರುವ ಉತ್ಸವದ ರಥವನ್ನು ಮುಂದಿನ ದಿನಗಳಲ್ಲಿಯೂ ಮುನ್ನಡೆಸಬೇಕು. ನಾಡಿನ ಹಂಪಿ ಕದಂಬ, ಲಕ್ಕುಂಡಿ, ಚಾಲುಕ್ಯ, ಧಾರವಾಡ ಉತ್ಸವದ ಸಾಲಿಗೆ ಬಳ್ಳಾರಿ ಉತ್ಸವವೂ ಸೇರಿದೆ. ಬಳ್ಳಾರಿ ನಗರವನ್ನು ಉಕ್ಕಿನ ನಗರ ಎಂದು ಕರೆಯುತ್ತೇವೆ. ದೇವರು ಬಳ್ಳಾರಿ ಜಿಲ್ಲೆಯನ್ನು ಉಕ್ಕಿನ ಜಿಲ್ಲೆಯಾಗಿ ಮಾಡಿದ್ದಾನೆ. ಹನುಮಪ್ಪ ನಾಯಕ ಉಕ್ಕಿನಂತಹ ಕೋಟೆ ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಭೂಪಟದಲ್ಲಿ ಬಳ್ಳಾರಿ ಜಿಲ್ಲೆಯನ್ನು ಸುವರ್ಣ ಅಕ್ಷರದಲ್ಲಿ ಗುರುತಿಸಲಾಗುತ್ತಿದೆ. ಜಿಲ್ಲೆಯ ಕಲೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಬಳ್ಳಾರಿ ಉತ್ಸವ ಆಯೋಜಿಸಲಾಗಿದೆ" ಎಂದರು.
"ಶತಮಾನದ ಇತಿಹಾಸವಿರುವ ಬಳ್ಳಾರಿಯ ಕೃಷಿ ಕಾಲೇಜಿಗೆ 25 ಕೋಟಿ ರೂ. ಮಂಜೂರು ಮಾಡಲಾಗಿದೆ. ಜೀನ್ಸ್ ಉತ್ಪಾದನಾ ಉದ್ಯಮಕ್ಕೆ 50 ಎಕರೆ ಜಮೀನು ನೀಡಿ, ಟೆಕ್ಸ್ಟೈಲ್ ಪಾರ್ಕ್ ನಿರ್ಮಿಸಲು ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2008 ರಲ್ಲಿ ಪ್ರಾರಂಭಿಸಿದ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿಯಾಗಿ 40 ಕೋಟಿ ನೀಡಲಾಗಿದೆ. ಶೀಘ್ರದಲ್ಲೇ ಬಳ್ಳಾರಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಾಗುವುದು. ನಗರದಲ್ಲಿ 20 ಎಕರೆ ವಿಸ್ತೀರ್ಣದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. 23 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಹಾಗೂ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ. ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಅನುಕೂಲವಾಗುವಂತೆ ಸಿಂಥೆಟಿಕ್ ಟ್ರಾಕ್ ನಿರ್ಮಿಸಲಾಗಿದೆ. ನಗರದಲ್ಲಿ ಹಾಕಿ ಕ್ರೀಡಾಂಗಣ ನಿರ್ಮಿಸಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು.