ಬಳ್ಳಾರಿ: ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಜಿಲ್ಲಾದ್ಯಂತ ಈ ಕುರಿತು ಜಾಗೃತಿ ಅಭಿಯಾನ ಮೂಡಿಸಲಾಗುತ್ತಿದೆ.
ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಶಸ್ವಿಯಾದರೆ ಸಮಗ್ರ ಶಿಕ್ಷಣಕ್ಕೆ ಆದ್ಯತೆ ನೀಡಿದಂತಾಗುತ್ತದೆ. ಎಲ್ಲ ರಂಗದಲ್ಲೂ ವಿದ್ಯಾರ್ಥಿಗಳು ಪರಿಣತಿ ಹೊಂದಲು ಇದು ಸಹಕಾರಿ ಆಗಲಿದೆ. ಆದ್ರೆ ಕೇಂದ್ರ - ರಾಜ್ಯ ಸರ್ಕಾರದಿಂದ ಜಿಲ್ಲೆಗಳಿಗೆ ಈ ಕುರಿತು ನಿರ್ದಿಷ್ಟ ಸೂಚನೆ ಸಿಕ್ಕಿಲ್ಲ ಎಂದು ಕೆಲ ದೂರು - ದುಮ್ಮಾನಗಳು ಕೇಳಿಬಂದಿದೆ. ಆದರೆ, ನಡೆಯಬೇಕಾದ ಪೂರ್ವ ತಯಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಸಿ. ರಾಮಪ್ಪ ಸಾರ್ವಜನಿಕ ಶಿಕ್ಷಣ ಇಲಾಖೆ ಸನ್ನದ್ಧ:
ಕೇಂದ್ರ - ರಾಜ್ಯ ಸರ್ಕಾರಗಳು ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವಾಗ ಬೇಕಾದರೂ ಜಾರಿಗೆ ತರಬಹುದು ಎಂಬುದನ್ನು ಮನಗಂಡ ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಜಾಗೃತಿ ಅಭಿಯಾನ ಕೈಗೊಂಡಿದೆ ಹಾಗೂ ಭೂಮಿಕೆ ಮಾಲೆಯನ್ನು ತಯಾರಿಸುವ ಕಾರ್ಯಕ್ಕೆ ಮುಂದಾಗಿದೆ. ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರಿಗೆ ಸೂಕ್ತ ತರಬೇತಿಯನ್ನೂ ಕೂಡ ನೀಡಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಡಕವಾಗಿರುವ ಅಂಶಗಳ ಕುರಿತು ಪ್ರತಿ ಶಾಲೆಗಳಿಗೂ ತೆರಳಿ ಶಿಕ್ಷಕರಿಗೆ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಇದಕ್ಕೆ ಹೇಗೆ ಹೊಂದಿಕೊಳ್ಳಬೇಕೆಂದು ಜನರಿಗೂ ಕೂಡ ಅರಿವು ಮೂಡಿಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ:ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಜಯಪುರ ಶಿಕ್ಷಣ ತಜ್ಞರಿಂದ ಮೆಚ್ಚುಗೆ
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಆಡಳಿತ) ಸಿ. ರಾಮಪ್ಪ, ನಮ್ಮ ಜಿಲ್ಲೆಯಲ್ಲಿ ಹೊಸ ಶಿಕ್ಷಣ ನೀತಿಯ ಬಗ್ಗೆ ವ್ಯಾಪಕ ಪ್ರಚಾರ ಹಾಗೂ ಜಾಗೃತಿ ಅಭಿಯಾನ ಮೂಡಿಸಲಾಗಿದೆ. ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರಿಗೂ ಕೂಡ ಸೂಕ್ತ ತರಬೇತಿಯನ್ನು ನೀಡಲಾಗಿದೆ. ಈಗಾಗಲೇ ಕಲಬುರಗಿ ವಿಭಾಗ ಮಟ್ಟದ ಆಯುಕ್ತರು ಈಗಾಗಲೇ ವೆಬಿನಾರ್ ಮೂಲಕ ಈ ಕುರಿತು ಜಾಗೃತಿ ಮೂಡಿಸಿದ್ದಾರೆ ಎಂದರು.
ಒಟ್ಟಾರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಿದ್ಧತೆಗಳು ನಡೆಯುತ್ತಿದ್ದು, ಪ್ರತಿ ಹಳ್ಳಿ-ಹಳ್ಳಿಗೂ ಸೂಕ್ತ ಮಾಹಿತಿ ತಲುಪಬೇಕಿದೆ. ಆಗಬೇಕಾದ ಕಾರ್ಯಗಳು ಚುರುಕುಗೊಳ್ಳಬೇಕಿದೆ.