ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ ಭಾಷಣ ಬಳ್ಳಾರಿ: "ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳಾದ ಬಳಿಕ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಕಾಂಗ್ರೆಸ್ಗೆ ಭವಿಷ್ಯ ಇಲ್ಲ. ಅವರು ಸಮುದ್ರ ಸೇರುವ ಕಾಲ ಸನ್ನಿಹಿತ" ಎಂದು ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಹೇಳಿದರು. ಸಿರಗುಪ್ಪ ನಗರದಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
"ಇತ್ತೀಚೆಗೆ ನಡೆದ ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿದೆ. ಗುಜರಾತ್ನಲ್ಲಿ ನಡೆದ ಚುನಾವಣೆಯಲ್ಲೂ ಕಮಲ ಅರಳಿದೆ. ಮುಂಬರುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸಬೇಕು. ಸೆಮಿಫೈನಲ್, ಫೈನಲ್ ಮ್ಯಾಚ್ನಲ್ಲೂ ಬಿಜೆಪಿ ಬೆಂಬಲಿಸಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡಬೇಕು" ಎಂದು ಕರೆ ನೀಡಿದರು.
"ಪ್ರಧಾನಿ ಮೋದಿ ನವ ಕರ್ನಾಟಕ ನಿರ್ಮಾಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರ ಯಾವುದೇ ಬಣ್ಣದ ಮಾತುಗಳಿಗೆ ಕಿವಿಕೊಡದೇ ಅಭಿವೃದ್ಧಿ ನಿರೀಕ್ಷಿಸಿ ಬಿಜೆಪಿ ಬೆಂಬಲಿಸಿ ಮೋದಿ ಹಾಗೂ ಬೊಮ್ಮಾಯಿ ಅವರ ಕೈ ಬಲಪಡಿಸಬೇಕು" ಎಂದರು. "ಸಿದ್ದರಾಮಯ್ಯಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆಯೇ ಇಲ್ಲ. ಕಾಂಗ್ರೆಸ್ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕೇಂದ್ರ ಕಾಂಗ್ರೆಸ್ನ ಎಟಿಎಂ ಸರ್ಕಾರವಾಗಿದ್ದನ್ನು ಅವರು ಮರೆತಿದ್ದಾರೆ. ಮೋದಿ ಸರ್ಕಾರದಲ್ಲಿ ದೇಶದಲ್ಲಿ ಯಾವುದೇ ಉಗ್ರಗಾಮಿ ದಾಳಿ ನಡೆದಿಲ್ಲ" ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ದೊಡ್ಡ ಬಜೆಟ್ ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಎಲ್ಲ ವಲಯಕ್ಕೂ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ರಾಜ್ಯ ಹಾಗೂ ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಮೋದಿ ಲಂಡನ್ನಲ್ಲಿ ಶ್ರೀ ಬಸವೇಶ್ವರರನ್ನು ನೆನೆದು ಸ್ಮರಿಸಿದರೆ, ರಾಹುಲ್ ಬಾಬಾ ವ್ಯಂಗ್ಯವಾಗಿ ಮಾತಾಡ್ತಾರೆ ಎಂದು ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದರು.
ನವಲಿ ಬಳಿ ಜಲಾಶಯ ನಿರ್ಮಾಣ: ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, "ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರ ಜಲಾಶಯದಿಂದ ಪ್ರತಿ ವರ್ಷ 40 ಟಿಎಂಸಿ ನೀರು ಸಮುದ್ರ ಪಾಲಾಗುತ್ತಿದೆ. ಇದನ್ನು ತಡೆಗಟ್ಟಿ ನಮ್ಮ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ವಿಧಾನಸೌಧದಲ್ಲಿ ಮೊದಲ ಬಾರಿಗೆ ಧ್ವನಿ ಎತ್ತಿದ್ದು, ಪರ್ಯಾಯವಾಗಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದು ಇದರ ಕೀರ್ತಿ ಸೋಮಲಿಂಗಪ್ಪ ಅವರಿಗೆ ಸಲ್ಲಬೇಕಿದೆ. ಈ ವಿಚಾರ ಆಂಧ್ರ ಮತ್ತು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ್ದು, ಆಂಧ್ರ, ತೆಲಂಗಾಣ ಎರಡೂ ರಾಜ್ಯದ ಸಿ.ಎಂ. ಜೊತೆ ನಮ್ಮ ಸಿ.ಎಂ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದಾರೆ. ಶೀಘ್ರದಲ್ಲೇ ಕಾಮಗಾರಿ ಶುರುವಾಗಲಿದೆ" ಎಂದರು.
"ಡಿಕೆಶಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಅವರ ಪಕ್ಷದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೂ ಸೇರಿದಂತೆ ಡಿಕೆಶಿ ಅವರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಇದನ್ನು ಕಾಂಗ್ರೆಸ್‌ನವರು ಮರೆಯಕೂಡದು" ಎಂದು ಹೇಳಿದರು.
ಇದನ್ನೂ ಓದಿ:ಅಂಜನಾದ್ರಿಗೆ ಇಂದು ಸಿಎಂ ಬೊಮ್ಮಾಯಿ ಭೇಟಿ: ₹120 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ