ಬಳ್ಳಾರಿ :ಮನೆಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಲಂಚ ಕೇಳಿದ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಕೇಂದ್ರ ತನಿಖಾ ದಳ (ಸಿಬಿಐ) ಬಲೆಗೆ ಬಿದ್ದಿದ್ದಾರೆ. ಬಳ್ಳಾರಿಯಲ್ಲಿ ಕಾರ್ಯಾಚರಣೆ ನಡೆದಿದೆ. ಪ್ರಶಾಂತ್ ರೆಡ್ಡಿ, ಯೋಗೀಶ್, ಮೊಹಮದ್ ಗೌಸ್ ಬಂಧಿತ ಅಧಿಕಾರಿಗಳು.
ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಎಂಬವರು ಸಿಬಿಐಗೆ ದೂರು ನೀಡಿದ್ದರು. ಇಂದು ಖಾಸಗಿ ಹೋಟೆಲ್ನಲ್ಲಿ ಲಂಚದ ಹಣವನ್ನು ಮುಂಗಡವಾಗಿ ನೀಡುತ್ತಿದ್ದಾಗ ಸಿಬಿಐ ದಾಳಿ ನಡೆಸಿದೆ. ರಾಜಶೇಖರ ಮುಲಾಲಿ ನಗರದ ಕೋಟೆ ಪ್ರದೇಶದಲ್ಲಿ ಮನೆ ಕಟ್ಟಲು ಮುಂದಾಗಿದ್ದಾರೆ. ಇದಕ್ಕಾಗಿ ಪುರಾತತ್ವ ಇಲಾಖೆಯಿಂದ ಎನ್‌ಒಸಿ ನೀಡಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಒಂದೂವರೆ ಲಕ್ಷ ಹಣ ನೀಡುವಂತೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಅವರು ಸಿಬಿಐಗೆ ದೂರು ನೀಡಿದ್ದರು. ಅದರಂತೆ ಖಾಸಗಿ ಹೋಟೆಲ್ನಲ್ಲಿ 50 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದಾಗ ಸಿಬಿಐ ತಂಡ ಕಾರ್ಯಾಚರಣೆ ನಡೆಸಿದೆ. ಬಂಧಿತರ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಪ್ರಶಾಂತ ರೆಡ್ಡಿ ಅವರು ಆಂಧ್ರಪ್ರದೇಶದ ಶಾಸಕರೊಬ್ಬರ ಸಂಬಂಧಿ ಎಂದು ತಿಳಿದುಬಂದಿದೆ.
ಗಾಂಜಾ ಮಾರಾಟ ಪ್ರಕರಣ: ಪ್ರಸಿದ್ಧ ಹಂಪಿ ಮತ್ತು ಆನೆಗೊಂದಿ ಪ್ರವಾಸಕ್ಕೆಂದು ಬರುತ್ತಿದ್ದ ವಿದೇಶಿಗರು ಸೇರಿದಂತೆ ಸ್ಥಳೀಯ ಪ್ರವಾಸಿಗರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲ ಬೇಧಿಸಿರುವ ಗ್ರಾಮೀಣ ಠಾಣೆಯ ಪೊಲೀಸರು 6 ಯುವಕರನ್ನು ಬಂಧಿಸಿದ್ದಾರೆ. ತಾಲೂಕಿನ ಸಣಾಪುರ ಗ್ರಾಮದಲ್ಲಿರುವ ಸಮತೋಲನಾ ಜಲಾಶಯದ (ಕೆರೆ) ಬಳಿಯ ವಾಟರ್ ಟ್ಯಾಂಕ್ ಹಿಂದೆ ನಶೆ ಉಂಟು ಮಾಡುವ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು.
ಆರೋಪಿಗಳು ಆನೆಗೊಂದಿ, ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಾನಾ ರೆಸಾರ್ಟ್ಗಳಲ್ಲಿ ತಂಗುವ ಉದ್ದೇಶಕ್ಕೆ ಬರುತ್ತಿದ್ದ ವಿದೇಶಿಗರು ಮತ್ತು ಸ್ಥಳೀಯ ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಗೊತ್ತಾಗಿದೆ. ಬಂಧಿತರೆಲ್ಲರೂ ದಾವಣಗೆರೆ, ಶಿವಮೊಗ್ಗ, ವಿಜಯನಗರ, ಬಳ್ಳಾರಿ ಜಿಲ್ಲೆಗೆ ಸೇರಿದವರು. ಆರೋಪಿಗಳು ಚಾರ್ಟರ್ಡ್ ಅಕೌಂಟೆಂಟ್, ಇಂಜಿನಿಯರ್, ಟೆಕ್ಕಿ, ಪ್ಯಾರಾಮೆಡಿಕಲ್ ವಿದ್ಯಾರ್ಥಿ ಮತ್ತು ಫಾರ್ಮಾಸಿಸ್ಟ್ ವೃತ್ತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಶಿಗ್ಗಾಂವಿ: ಸಿಸಿಟಿವಿ ಕ್ಯಾಮರಾಗೆ ಬಟ್ಟೆ ಹಾಕಿ ಚಿನ್ನದಂಗಡಿ ದೋಚಿದ ಕಳ್ಳರು