ಬಳ್ಳಾರಿ:ಕೊರೊನಾದಿಂದ ಬಳಲುತ್ತಿದ್ದ ಜಿಲ್ಲೆಯ ಮತ್ತೋರ್ವ ಸೋಂಕಿತ ಇಂದು ಗುಣಮುಖನಾದ ಹಿನ್ನೆಲೆಯಲ್ಲಿ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಸಂಜೆ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 12ಕ್ಕೇರಿದ್ದು, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 4ಕ್ಕೆ ಇಳಿದಿದೆ.
ಸೋಮವಾರದಂದು ಕಂಪ್ಲಿ ತಾಲೂಕಿನಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಇದುವರೆಗೆ 16 ಜನ ಕೊರೊನಾ ಸೋಂಕಿತರಾದಂತಾಗಿದೆ. ಅವರಲ್ಲಿ ಈ ಮೊದಲು ಗುಣಮುಖರಾದ P-89, P-91 ಮತ್ತು P-141 ನಂತರ P-90 & P-151 ಅವರನ್ನು ಬಿಡುಗಡೆ ಮಾಡಲಾಗಿತ್ತು. ಮತ್ತೆ 21 ವರ್ಷ ವಯಸ್ಸಿನ P-333 & 24 ವರ್ಷದ P- 337 ಮತ್ತು ಹೊಸಪೇಟೆಯ P-336 ಗುಣಮುಖರಾಗಿದ್ದರು. ಕೆಲ ದಿನಗಳ ಹಿಂದೆ ಹೊಸಪೇಟೆಯ 72 ವರ್ಷದ P-332 ಮತ್ತು ಇನ್ನಿಬ್ಬರಾದ 48 ವರ್ಷದ P-334 ಮತ್ತು 10 ವರ್ಷದ P-335 ಬಿಡುಗಡೆ ಮಾಡಲಾಗಿತ್ತು.
ಇಂದು ಸಿರುಗುಪ್ಪ ತಾಲೂಕಿನ ಹೆಚ್.ಹೊಸಳ್ಳಿ ಗ್ರಾಮದ 14 ವರ್ಷದ P-113 ಬಾಲಕ ಗುಣಮುಖನಾದ ಹಿನ್ನೆಲೆ ಆತನನ್ನು ಬಿಡುಗಡೆ ಮಾಡಲಾಯಿತು. P-113 ಬಾಲಕ ನಂಜನಗೂಡಿನಿಂದ ಸಿರುಗುಪ್ಪಕ್ಕೆ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ.
ಬಳ್ಳಾರಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಮತ್ತೋರ್ವ ಡಿಸ್ಚಾರ್ಜ್ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್.ಬಸರೆಡ್ಡಿ ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ಧರಾಗಿ ನಿಂತಿದ್ದ P-113 ಬಾಲಕನಿಗೆ ಹೂಗುಚ್ಚ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ದಿನಸಿ ಕಿಟ್ ಕಳಿಸಿಕೊಡಲಾಯಿತು.
ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು. ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. ಆತ್ಮಸ್ಥೈರ್ಯವನ್ನು ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮವಹಿಸಿದೆವು. ಗುಣಮುಖರಾಗಿದ್ದರಿಂದ ನಮಗೆ ತುಂಬಾ ಸಂತೋಷವಾಗುತ್ತಿದೆ ಎಂದರು.
ಈ ಬಾಲಕ ಮಾನಸಿಕ ಖಿನ್ನತೆಗೊಳಗಾಗರಬಾರದು ಎಂಬ ದೃಷ್ಟಿಯಿಂದ ಇಡೀ ವೈದ್ಯರ ತಂಡವೇ ವಿಶೇಷ ಗಮನ ಹರಿಸಿತ್ತು. ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಎರಡ್ಮೂರು ಬಾರಿ ಪಾಸಿಟಿವ್ ಬಂದ ಕಾರಣ ಬಿಡುಗಡೆಯಾಗುವುದು ತಡವಾಯಿತು. ಕೊನೆಗೂ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.
ಆಸ್ಪತ್ರೆಗೆ ದಾಖಲಾಗಿ ಇಲ್ಲಿಯವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ಕೊಟ್ಟರು. ಆತ್ಮಸ್ಥೈರ್ಯ ಕಳೆದುಕೊಂಡಿದ್ದ ನಮ್ಮನ್ನು ಮಾನಸಿಕವಾಗಿಯೂ ಸಜ್ಜುಗೊಳಿಸಿದರು ಮತ್ತು ಗುಣಮಟ್ಟದ ಆಹಾರ ಒದಗಿಸಿದರು. ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಋಣ ನಾನೆಂದೂ ಮರೆಯುವುದಿಲ್ಲ ಎಂದು ಬಿಡುಗಡೆಯಾದ ಬಾಲಕ ತನ್ನ ಮನದಾಳವನ್ನು ಬಿಚ್ಚಿಟ್ಟಿದ್ದಾನೆ.