ವಿಜಯನಗರ:ಹೊಸಪೇಟೆನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಸೇರಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆರು ಜನರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಪೋಲಪ್ಪ ಈ ಕುರಿತು ಮಾತನಾಡಿದ್ದು,'ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ನಿನ್ನೆ ಮಧ್ಯಾಹ್ನ ಬೆಂಬಲಿಗರೊಂದಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ನಿನ್ನ ಹೆಂಡತಿ ಮತ್ತು ನಿನಗೆ ಬೆಂಕಿ ಹಚ್ಚಿ ಸುಡ್ತೀನಿ, ನಿಮ್ಮ ಮಕ್ಕಳನ್ನು ಬೀದಿಪಾಲು ಮಾಡ್ತೀನಿ ಅಂತ ಎಂದು ಜೀವ ಬೆದರಿಕೆ ಒಡ್ಡಿದ್ದರು. ಅದರಿಂದ ಎಸ್ಪಿ ಕಚೇರಿಗೆ ದೂರು ಕೊಡಲು ಹೋಗಿದ್ದೆ. ಎಸ್ಪಿಯವರು ಕಚೇರಿಯಲ್ಲಿ ಇಲ್ಲದ ಕಾರಣ ಪೆಟ್ರೋಲ್ ಹಾಕಿಕೊಂಡು ಜೀವ ಕೊಡಲು ಮುಂದಾಗಿದ್ದೆ' ಎಂದು ಠಾಣೆಗೆ ಲಿಖಿತ ರೂಪದ ದೂರು ಕೊಟ್ಟಿರುವುದಾಗಿ ಹೇಳಿದ್ದಾರೆ.
ಅನಂತರ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಎಸ್ಪಿ ಕಚೇರಿಯ ಧ್ವಜ ಕಟ್ಟೆ ಎದುರು ಏಕಾಏಕಿ ಬಂದು ಪೆಟ್ರೋಲ್ ಮೈ ಮೇಲೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರಿಂದ ಪೋಲಪ್ಪ ಹಾಗೂ ಅವರ ಕುಟುಂಬದ ಆರು ಜನ ಸದಸ್ಯರ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.
ಅವ್ಯವಹಾರದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಕ್ಕೆ ಬೆದರಿಕೆ : ಪೋಲಪ್ಪ ಹೇಳುವ ಪ್ರಕಾರ, 'ನಾವೀಗ ವಾಸ ಮಾಡ್ತಿರೋ ಜಾಗ ಆನಂದ್ ಸಿಂಗ್ ಅಥವಾ ಸರ್ಕಾರ ಹಾಗೂ ಮಡಿವಾಳ ಸಮಾಜಕ್ಕೆ ಸಂಬಂಧಿಸಿದ್ದಲ್ಲ. 80 ವರ್ಷಗಳ ಹಿಂದೆ ಮಲ್ಲಿಕಾರ್ಜುನ ವಿರಕ್ತ ಮಠದ ಶ್ರೀಗಳು ನಮ್ಮ ಹೆಂಡತಿಯ ತಾತನವರಿಗೆ ನೀಡಿದ್ದರು. ಅಂದಿನಿಂದ ಈ ಆಸ್ತಿಯನ್ನು ಅವರು ಅವರ ನಂತರದವರು ನಿರ್ವಹಣೆ ಮಾಡುತ್ತ ಬಂದಿದ್ದಾರೆ. ಆರು ತಿಂಗಳ ಹಿಂದೆ ಆನಂದ್ ಸಿಂಗ್ ಅವರ ಅವ್ಯವಹಾರದ ಬಗ್ಗೆ ನಾನು ದಾಖಲಾತಿ ಬಿಡುಗಡೆ ಮಾಡಿದ್ದೆ. ಅಂದಿನಿಂದ ಧಮ್ಕಿ ಹಾಕುತ್ತ, ಕಿರುಕುಳ ಕೊಡ್ತಿದ್ದಾರೆ. ಅವರ ಅವ್ಯವಹಾರದ ಕುರಿತ ದೂರು ಹಿಂಪಡೆಯದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ' ಅಂತ ಬೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ರಮ ಬಯಲಿಗೆಳೆದಿದ್ದಕ್ಕೆ ಜೀವ ಬೆದರಿಕೆ ಎಂದ ಪೋಲಪ್ಪ ನಿನ್ನೆ ಮಧ್ಯಾಹ್ನ ಜೀವ ಬೆದರಿಕೆ : ನಿನ್ನೆ ಮಧ್ಯಾಹ್ನ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ. ಸಚಿವರು ನಗರಸಭೆಯವರನ್ನು ಸ್ಥಳಕ್ಕೆ ಕರೆಸಿ ನಮ್ಮನ್ನು ಇಲ್ಲಿಂದ ತೆರವುಗೊಳಿಸುವಂತೆ ಸೂಚಿಸಿದರು ಎಂದೂ ಪೋಲಪ್ಪ ದೂರಿದ್ದರು. ಆದ್ರೆ ಪೋಲಪ್ಪ ಅವರ ಆರೋಪವನ್ನು ಸಚಿವ ಆನಂದ್ ಸಿಂಗ್ ತಳ್ಳಿಹಾಕಿದ್ದಾರೆ.
ಆನಂದ್ ಸಿಂಗ್ ಪ್ರತಿಕ್ರಿಯೆ : 'ಇದು ಮಡಿವಾಳ ಸಮಾಜ ಹಾಗೂ ಅಲ್ಲಿ ವಾಸ ಮಾಡೋ ಪೋಲಪ್ಪ ಎನ್ನೋ ವ್ಯಕ್ತಿ ನಡುವಿನ ವಿಚಾರ. ಮಡಿವಾಳ ಸಮಾಜದ ಮಹಿಳೆಯನ್ನು ಪೋಲಪ್ಪ ಮದುವೆ ಮಾಡಿಕೊಂಡಿರೋ ವಿಚಾರ ತಡವಾಗಿ ಗೊತ್ತಾಗಿದೆ. ಪೋಲಪ್ಪ ಅವರಿಗೆ ನಾಲ್ಕು ತಿಂಗಳ ಹಿಂದೆ ಕಚೇರಿಗೆ ಕರೆದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದೆ. ನಾನು ಶಾಸಕನಾದ ಮೇಲೆ ಇಬ್ಬರೂ ಸರಿಪಡಿಸಿಕೊಂಡು ಹೋಗಿ ಅಂತ ಸಲಹೆ ನೀಡಿದ್ದೆ. ಆದರೆ ಯಾವುದೇ ರೀತಿ ಆ ಸಮಸ್ಯೆ ಬಗೆಹರಿದಿಲ್ಲ. ಮತ್ತೊಮ್ಮೆ ಪೋಲಪ್ಪ ಹಾಗೂ ಮಡಿವಾಳ ಸಮಾಜದ ಮುಖಂಡರನ್ನು ಕರೆದು ರಾಜಿ ಯತ್ನ ಮಾಡಿದೆ. ಪೋಲಪ್ಪ ವಾಸ ಮಾಡೋ ಜಾಗವಲ್ಲದೇ ಒಂದು ಎಕರೆ ಮೂವತ್ತು ಗುಂಟೆ ಜಮೀನು ಸಹ ನಾಗೇನಹಳ್ಳಿ ಬಳಿ ಇದೆ ಎನ್ನೋ ವಿಚಾರವೂ ಗೊತ್ತಾಗಿದೆ. ಅದನ್ನು ನೀವು ತಗೊಳಿ, ಇಲ್ಲಿರೋದನ್ನು ಪೋಲಪ್ಪ ತೆಗೆದುಕೊಳ್ಳಲಿ ಅಂತ ಮಡಿವಾಳ ಸಮಾಜದವರಿಗೆ ಸಲಹೆ ನೀಡಿದ್ದೆ' ಎಂದಿದ್ದಾರೆ.
'ಪೋಲಪ್ಪ ವಾಸವಾಗಿರೋ ಜಾಗದಲ್ಲಿ ಅರ್ಧ ಜಾಗವೂ ಬೇಕು ಅಂತ ಮಡಿವಾಳ ಸಮಾಜದವರು ಕೇಳಿದ್ದರು. ಅಷ್ಟರಲ್ಲಿ ಚಿತ್ರದುರ್ಗದ ಮಡಿವಾಳ ಮಠದ ಹೆಸರಲ್ಲಿನಲ್ಲಿ ಈ ಜಾಗ ಇದೆ ಎನ್ನೋ ವಿಚಾರ ಗೊತ್ತಾಗಿದೆ. ಆ ಮಠದವರೂ ಬಂದು ನನ್ನನ್ನು ಭೇಟಿ ಮಾಡಿದರು, ಅವರಿಗೆ ದಾಖಲೆ ತಗೊಂಡು ಬನ್ನಿ ಅಂತ ಹೇಳಿ ಕಳಿಸಿದ್ದೆ. ನನಗೂ ಎರಡು ತಿಂಗಳು ಆರೋಗ್ಯ ಸರಿಯಿಲ್ಲದ ಕಾರಣ ಮನೆಯಲ್ಲಿದ್ದೆ. ನಿನ್ನೆ ಮಡಿವಾಳ ಸಮಾಜದವರ ಮನವಿ ಮೇರೆಗೆ ನಾನೂ ಸಹ ಸ್ಥಳಕ್ಕೆ ಹೋದೆ, ನಗರಸಭೆ ಕಮಿಷನರ್ ಅವರ ಬಳಿ ಸಮಸ್ಯೆ ಇದೆ ಬನ್ನಿ ಎಂದು ಕರೆದುಕೊಂಡು ಹೋದೆ. ಆಗ ಪೋಲಪ್ಪ ಅವರೇ ನಾನು ದೌರ್ಜನ್ಯ ಮಾಡ್ತಿದ್ದೀರಿ ಅಂತ ಹೇಳಿದರು. ಇದು ನಿನ್ನ ಪಿತ್ರಾರ್ಜಿತ ಆಸ್ತಿ ಅಲ್ಲ, ನಿನ್ನ ಅತ್ತೆ ಮಾವನಿಗೆ ಸಂಬಂಧಿಸಿದ್ದು, ನೀನು ಮಾತಾಡಬೇಡ ಎಂದು ಸಲಹೆ ನೀಡಿದೆ. ಮಡಿವಾಳ ಸಮಾಜದವರು ಅವರ ಹೆಸರು ಬರೆಯೋದಕ್ಕೆ ಹೋದ್ರು. ಆಗ ಪೋಲಪ್ಪ ಅವರ ಕಡೆಯವರು ಬಂದು ಅಳಿಸಿ ಹಾಕಿದರು' ಅಂತಾ ಸಚಿವ ಆನಂದ ಸಿಂಗ್ ಸ್ಪಷ್ಟನೆ ನೀಡಿದರು.
ಆರೋಪ ಅಲ್ಲಗಳೆದ ಆನಂದ್ ಸಿಂಗ್ ದಾಖಲೆ ಸರಿ ಇಲ್ಲದಿದ್ದಲ್ಲಿ ಸರ್ಕಾರಕ್ಕೆ : ಆಗ ಕಮಿಷನರ್ ಅವರಿಗೆ ಜಾಗದ ಬಗ್ಗೆ ದಾಖಲಾತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಅಂತ ಸಲಹೆ ನೀಡಿದೆ. ದಾಖಲೆ ಸರಿಯಿಲ್ಲವಾದರೆ ಸರ್ಕಾರದ ವಶಕ್ಕೆ ಪಡೆಯಿರಿ ಎಂದು ಕಮಿಷನರ್ ಅವರಿಗೆ ಸೂಚಿಸಿದ್ದೇನೆ. ನನ್ನ ಮೇಲೆ ಆರೋಪವಿದೆ. ಈ ಬಗ್ಗೆ ಇಲಾಖೆಗಳಿವೆ ತನಿಖೆ ಮಾಡಲಿ, ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದರು.
ಜಾತಿ ನಿಂದನೆ ಮಾಡಿಲ್ಲ : ಆ ಹುಡುಗ ಯಾವ ಜಾತಿ ಅನ್ನೋದೇ ನನಗೆ ಗೊತ್ತಿಲ್ಲ, ನಾನು ಜಾತಿ ನಿಂದನೆ ಮಾಡೋ ವ್ಯಕ್ತಿಯೂ ಅಲ್ಲ. ಹಾಗೇನಾದರೂ ನನ್ನದು ತಪ್ಪಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ. ನಾನು ಮಂತ್ರಿ ಅಂತ ಯಾವೊಬ್ಬ ಅಧಿಕಾರಿಗಳ ಮೇಲೂ ಪ್ರಭಾವ ಬೀರಲ್ಲ. ತನಿಖೆ ನಡೆದ ಮೇಲೆ ಸತ್ಯಾಸತ್ಯತೆ ಹೊರಗೆ ಬರುತ್ತೆ. ನಾನೂ ಸಹ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದರು.
ಆರೋಪ ಶುದ್ಧ ಸುಳ್ಳು : ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಶುದ್ಧ ಸುಳ್ಳು. ನಾನು ಯಾರಿಗೂ ಜೀವ ಬೆದರಿಕೆ ಹಾಕಿಲ್ಲ. ಜಾತಿ ನಿಂದನೆ ಮಾಡಿಲ್ಲ. ಸಾಕ್ಷ್ಯಗಳಿದ್ದರೆ ಒದಗಿಸಲಿ. ಕಾನೂನು ಎಲ್ಲರಿಗೂ ಒಂದೇ ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ :ಜೀವ ಬೆದರಿಕೆ ಪ್ರಕರಣ : ಆನಂದ್ ಸಿಂಗ್ ಸೇರಿ ನಾಲ್ವರ ವಿರುದ್ಧ ದೂರು ದಾಖಲು