ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತನ್ನ ಮೇಲಿರುವ ಪ್ರಕರಣಗಳನ್ನು ಮುಚ್ಚಿ ಹಾಕಲು ವಿಜಯ ನಗರ ಜಿಲ್ಲೆ ಸ್ಥಾಪನೆ ಮಾಡುವ ಹುನ್ನಾರ ಮಾಡಿದ್ದಾರೆ ಎಂದು ಮಹಾತ್ಮ ಗಾಂಧಿ ಕಾರ್ಮಿಕ ಸಂಘದ ಅಧ್ಯಕ್ಷ ಜಾಕಿರ್ ದೂರಿದರು.
ವಿಜಯನಗರ ಸ್ಥಾಪನೆ ಆನಂದ್ ಸಿಂಗ್ ಸ್ವಾರ್ಥದ ಕೂಸು: ಮಹಾತ್ಮ ಗಾಂಧಿ ಕಾರ್ಮಿಕ ಸಂಘದ ಅಧ್ಯಕ್ಷರ ಆರೋಪ - ಸಚಿವ ಆನಂದ್ ಸಿಂಗ್
ಇಂದು ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ ಜಿಲ್ಲೆಯ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ವೇಳೆ, ವಿಜಯನಗರ ಸ್ಥಾಪನೆ ಮೂಲಕ ಆನಂದ್ ಸಿಂಗ್ ನಿಜ ಬಣ್ಣ ಮರೆಮಾಚುವ ಯತ್ನ ನಡೆದಿದೆ ಎಂದು ಮಹಾತ್ಮ ಗಾಂಧಿ ಕಾರ್ಮಿಕ ಸಂಘದ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದರು.
ಗಣಿನಾಡು ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಳ್ಳಾರಿ ಜಿಲ್ಲಾ ವೃತ್ತಿ ನಿರತ ಛಾಯಾಚಿತ್ರಗ್ರಾಹಕರು, ವಿಡಿಯೋಗ್ರಾಹಕರು ಮತ್ತು ಸ್ಟುಡಿಯೋ ಮಾಲೀಕರ ಸಂಘ ಸೇರಿದಂತೆ ಮಹಾತ್ಮ ಗಾಂಧಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಇಂದು ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ 18ನೇ ದಿನದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ. ಈ ಸಮಯದಲ್ಲಿ ಮಹಾತ್ಮ ಗಾಂಧಿ ಕಾರ್ಮಿಕ ಸಂಘದ ಅಧ್ಯಕ್ಷ ಜಾಕಿರ್ ಮಾತನಾಡಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತನ್ನ ಮೇಲಿರುವ ಕೇಸ್ ಗಳನ್ನು ಮುಚ್ಚಿ ಹಾಕಲು ವಿಜಯ ನಗರ ಜಿಲ್ಲೆ ಸ್ಥಾಪನೆ ಮಾಡಿದ್ದಾರೆ. ಹಾಗೇ ಅವರು ತನ್ನ ಸ್ವಾರ್ಥಕ್ಕಾಗಿ ಜಿಲ್ಲೆಯ ವಿಭಜನೆ ಮಾಡಿ ಜನರಿಗೆ ಸಮಸ್ಯೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.